ಮೈಸೂರು: ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆ ಸಂವಿಧಾನ ಶಿಲ್ಪಿಯ ಜೀವನ ಚರಿತ್ರೆ ಕುರಿತು ಆಲ್ಬಂ ಸಾಂಗ್ವೊಂದು ಸಿದ್ಧವಾಗಿದೆ. ಕೇವಲ ಐದು ನಿಮಿಷಗಳಲ್ಲೇ ಅಂಬೇಡ್ಕರ್ ಜೀವನದ ಪ್ರಮುಖ ಘಟನೆಗಳನ್ನು ತಿಳಿಸಲಾಗಿದೆ.
ಕಾರ್ಮೋಡ ಕವಿದಿದೆ..ಕತ್ತಲೆ ಆವರಿಸಿದೆ.. ಕೋಲ್ಮಿಂಚಿನ ವೇಗದಲ್ಲಿ ಬೆಳಕಾಗಿ ಹರಿದಿದೆ.. ಇವರೇ ನಮ್ಮ ನಾಯಕ.. ಹೀಗೆ ಶುರುವಾಗುವ ಹಾಡು ಎಂಥವರಿಗೂ ಮೈ ನವಿರೇಳಿಸುತ್ತೆ. ಒಂದೂವರೆ ತಿಂಗಳ ಪರಿಶ್ರಮದ ಫಲವಾಗಿ ಸಿದ್ಧವಾಗಿರುವ ಆಲ್ಬಂಅನ್ನು ಅಂಬೇಡ್ಕರ್ ಜಯಂತಿಗೆ ಡೆಡಿಕೇಟ್ ಮಾಡಲಾಗಿದೆ.
ಅಂಬೇಡ್ಕರ್ ಜೀವನ ಚರಿತ್ರೆಯನ್ನು ಆಲ್ಬಮ್ ಸಾಂಗ್ ಮಾಡ್ಬೇಕು ಅನ್ನೋದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಡ್ಯ ಜಿಲ್ಲೆಯ ಉಪನಿರ್ದೇಶಕ ಸೋಮಶೇಖರ್ ಜಿಗಣಿ ಅವರ ಪರಿಕಲ್ಪನೆ. ಮೈಸೂರಿನ ಯುವ ಕೊಳಲು ವಾದಕ ನೀತು ನಿನಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಪ್ರಯತ್ನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಪುನೀತ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಕೆಆರ್ ಸ್ಟುಡಿಯೋ ಆಲ್ಬಂ ಸಾಂಗ್ ನಿರ್ಮಾಣ ಮಾಡಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅದ್ಭುತವಾಗಿ ಹಾಡಿದ್ದಾರೆ.
ಅಂಬೇಡ್ಕರ್ ಜೀವನ ಚರಿತ್ರೆ ಬಹುತೇಕರಿಗೆ ಗೊತ್ತಿದೆ. ಜೀವನ, ಸಾಧನೆ, ಐತಿಹಾಸಿಕ ಮೈಲುಗಲ್ಲುಗಳನ್ನು ಕೇವಲ ಐದು ನಿಮಿಷದಲ್ಲಿ ಕಟ್ಟಿಕೊಡೋದು ಅಷ್ಟು ಸುಲಭದ ಮಾತಲ್ಲ. ಆತ್ಯಾಧುನಿಕ ಟೆಕ್ನಾಲಜಿ ಬಳಸಿಕೊಂಡು ರೋಹಿತ್ ಪಟೇಲ್ ಸಾರಥ್ಯದ ವಿದ್ವತ್ ಸಂಸ್ಥೆ ಗ್ರಾಫಿಕ್ಸ್ ಡಿಸೈನ್ ಮಾಡಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಿಕೆಆರ್ ಯೂಟ್ಯೂಬ್ ಚಾನಲ್ನಲ್ಲಿ ಇವರೇ ಮಹಾನಾಯಕ ಬಿಡುಗಡೆಯಾಗಲಿದೆ. ಅಂಬೇಡ್ಕರ್ ಜಯಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಲು ಸೋಮಶೇಖರ್ ಜಿಗಣಿ ಮತ್ತು ತಂಡದವರು ಉತ್ಸಕರಾಗಿದ್ದಾರೆ.