ಮೈಸೂರು: ಕುಟುಂಬದ ಆಸ್ತಿ ವಿವಾದಕ್ಕಾಗಿ ವೃದ್ಧ ದಂಪತಿಗಳಿಗೆ ದಿಗ್ಬಂಧನ ವಿಧಿಸಿರುವ ಅಮಾನವೀಯ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ವೃದ್ಧ ದಂಪತಿಯ ಕಷ್ಟವನ್ನು ಕೇಳೋರೆ ಇಲ್ಲದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಕೂಡ ಈ ಕುಟುಂಬಕ್ಕೆ ಮಾತ್ರ ಬದುಕುವ ನೈಜ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ನೆರೆಹೊರೆಯವರ ದ್ವೇಷಕ್ಕೆ ಕಗ್ಗತ್ತಲಲ್ಲೇ 40 ವರ್ಷಗಳನ್ನು ಕಳೆದಿದ್ದಾರೆ ಈ ವೃದ್ಧ ದಂಪತಿ.
ಮಾದನಾಯ್ಕ ಮತ್ತು ಯಶೋಧ ದಂಪತಿ ನೀರು, ಬೆಳಕು, ಶೌಚಾಯಲವಿಲ್ಲದೆ ಬದುಕುತ್ತಿರುವವರು. ಯಾಕಂದ್ರೆ, ಇವರು ವಾಸಿಸುತ್ತಿರುವ ಮನೆ ತಮಗೆ ಸೇರಿದ್ದೆಂದು ಪಕ್ಕದಲ್ಲಿರುವ ಗ್ರಾಮಸ್ಥರೊಬ್ಬರು ಕೋರ್ಟ್‌ನಲ್ಲಿ ವ್ಯಾಜ್ಯ ಹೂಡಿದ್ದರು. ಈ ಪ್ರಕರಣದಲ್ಲಿ ಮಾದನಾಯ್ಕ ಪರ ಶಾಶ್ವತ ಇಂಜಕ್ಷನ್ ಆರ್ಡರ್ ಇದ್ದರೂ, ಈ ಆದೇಶದ ಮೇಲೆ ನ್ಯಾಯಾಲಯ ಈ ತನಕ ಯಾವುದೇ ಆದೇಶ ನೀಡಿಲ್ಲ. ಆದ್ರೆ, ಮಾದನಾಯ್ಕ ಕುಟುಂಬಕ್ಕೆ ನೀರು, ಕರೆಂಟ್, ಶೌಚಾಲಯದ ವ್ಯವಸ್ಥೆ ಕಲ್ಪಿಸದೇ ಇಡೀ ಊರಿನ ಜನ ನಿರಂತರ ಅನ್ಯಾಯ ಮಾಡುತ್ತಾ ಬಂದಿದ್ದಾರೆ.
ಮನೆಗೆ ಭಾಗ್ಯಜ್ಯೋತಿಯಡಿ ವಿದ್ಯುತ್ ಲೈನ್ ಎಳೆದಿದ್ದರೂ ದೀಪಗಳು ಮಾತ್ರ ಉರಿಯುತ್ತಿಲ್ಲ. ಮನೆ ಹರಕು-ಮುರುಕಾಗಿದ್ದರೂ ಆಶ್ರಯ ಯೋಜನೆಯ ಫಲ ಸಿಕ್ಕಿಲ್ಲ. ವೃದ್ಧೆ ಯಶೋಧಮ್ಮ ನಿತ್ಯ 800 ಮೀಟರ್ ದೂರದಿಂದ ಕುಡಿಯುವ ನೀರು ಹೊತ್ತು ತರುತ್ತಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯದ ವ್ಯವಸ್ಥೆ ಇಲ್ಲದ ಹಿನ್ನೆಲೆ ಬಹಿರ್ದೆಸೆಗೆ ಕಿ.ಲೋ ದೂರ ಹೋಗಬೇಕು. ಜೊತೆಗೆ ರಾತ್ರಿಯಾದರೆ ಸೀಮೆಎಣ್ಣೆ ದೀಪದಲ್ಲೇ ಕಾಲ ಕಳೆಯಬೇಕು.
ಇಷ್ಟೆಲ್ಲಾ ಸಮಸ್ಯೆಗಳನ್ನು ಹೊತ್ತು ಸ್ಥಳೀಯವಾಗಿ ಆಯ್ಕೆಯಾದ ಪಂಚಾಯಿತಿ ಸದಸ್ಯರಿಂದ ಹಿಡಿದು ಎಲ್ಲಾ ಸರ್ಕಾರಿ ಕಚೇರಿಗಳ ಬಳಿ ಮಾದನಾಯ್ಕ ಅಲೆದು-ಅಲೆದು ಸುಸ್ತಾಗಿದ್ದಾರೆ. ಯಾರೊಬ್ಬರು ಇವರ ಬೆನ್ನಿಗೆ ನಿಂತಿಲ್ಲ.
ಇನ್ನಾದರೂ ಸಂಬಂಧ ಪಟ್ಟವರು ಈ ಅನ್ಯಾಯವನ್ನು ಸರಿಪಡಿಸಲು ಮುಂದಾಗಬೇಕಿದೆ. ಈ ವೃದ್ಧ ದಂತಿಗಳಿಗೆ ನ್ಯಾಯ ದೊರಕಿಸಿಕೊಡಬೇಕಿದೆ.