ಮಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5ಲಕ್ಷ ರೂ. ನೀಡುತ್ತೇನೆ ಎಂದು ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಈ ನಿಧಿಗೆ ಸಹಾಯ ಮಾಡಲು ಸಹಕರಿಸುವೆ ಎಂದು ಹೇಳಿದರು.
ಕೊರೊನಾ ಕಾಲದಲ್ಲಿ ಪತ್ರಕರ್ತರ ಆರ್ಥಿಕ ಸ್ಥಿತಿಗತಿ ಅತಂತ್ರವಾಗಿದೆ. ಆದರೂ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆದ್ದರಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ, ಕೊರೊನಾ ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ ಪತ್ರಕರ್ತರು ಕಂಗೆಟ್ಟಿದ್ದಾರೆ. ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಸುಮಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಮಂದಿಯ ಸಂಬಳ ಕಡಿತ ಆಗಿದೆ. ಆದ್ದರಿಂದ ಪತ್ರಕರ್ತರ ಆಸ್ಪತ್ರೆಯ ಬಿಲ್ಗಾಗಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ನಾನು ಕೂಡಾ 5 ಲಕ್ಷ ರೂ. ಹಣವನ್ನು ವೈಯಕ್ತಿಕವಾಗಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭ ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ.. ಕೊಪ್ಪಳ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಹೊಸ ಪ್ರಯತ್ನ: ನಗರಸಭೆ ಸಿಬ್ಬಂದಿ ಕೈ ಸೇರಿತು ವಾಕಿಟಾಕಿಗಳು