ಮಂಗಳೂರು: ಕೇರಳ ರಾಜ್ಯದ ಕಣ್ಣೂರು ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಹೊರಟಿದ್ದ ಮಹಿಳೆಗೆ ಹಠಾತ್ ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ವಿಮಾನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿ, ಚಿಕಿತ್ಸೆ ಒದಗಿಸಿರುವ ಅಪರೂಪದ ಘಟನೆ ನಡೆದಿದೆ.
33 ವರ್ಷದ ಮಹಿಳೆ ತಮ್ಮ ಪತಿ ಹಾಗೂ ಮೂವರು ಸಣ್ಣಪುಟ್ಟ ಮಕ್ಕಳೊಂದಿಗೆ ಕಣ್ಣೂರಿನಿಂದ ಶಾರ್ಜಾಕ್ಕೆ ಡಿ.3ರಂದು ಬೆಳಗ್ಗೆ ಪ್ರಯಾಣ ಬೆಳೆಸಿದ್ದರು. ವಿಮಾನ ಟೇಕ್ ಅಫ್ ಆಗಿ ಸ್ವಲ್ಪ ಸಮಯದಲ್ಲಿಯೇ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.
ಈ ವೇಳೆ ವಿಮಾನದಲ್ಲಿದ್ದ ವೈದ್ಯರು ಆಕೆಯನ್ನು ತಪಾಸಣೆ ಮಾಡಿದ ಬಳಿಕ ಮಹಿಳೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಿದ್ದರು. ತಕ್ಷಣ ಪೈಲಟ್ ಮಂಗಳೂರು ವಿಮಾನದ ನಿಲ್ದಾಣದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಿದರು. ತಕ್ಷಣ ಅಧಿಕಾರಿಗಳು ವಿಮಾನದ ತುರ್ತು ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಆ ವಿಮಾನ ಲ್ಯಾಂಡ್ ಆದ ತಕ್ಷಣ ಆಕೆಯನ್ನು ರಸ್ತೆ ಮೂಲಕ ಕೇವಲ 17 ನಿಮಿಷದಲ್ಲಿ ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಮಂಗಳೂರು ಏರ್ಪೋರ್ಟ್ ಅಧಿಕಾರಿಗಳು ಮಹಿಳೆಯ ಪತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಆ ಬಳಿಕ ಮಹಿಳೆಯ ಆರೋಗ್ಯ ಸ್ಥಿರವಾದ ಬಳಿಕ ಆಕೆ ಮತ್ತೆ ಪ್ರಯಾಣ ಮಾಡಲು ಶಕ್ತಳಾಗಿದ್ದಾರೆ ಎಂದು ಆಕೆಗೆ ವೈದ್ಯಕೀಯ ಸೇವೆ ನೀಡಿರುವ ವೈದ್ಯರು ತಿಳಿಸಿದರು. ಆ ನಂತರ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳೇ ಮತ್ತೆ ಅವರು ಶಾರ್ಜಾಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ದಂಪತಿ ಮರಳಿ ಅದೇ ದಿನ ರಾತ್ರಿ 11ಗಂಟೆಯ ವಿಮಾನದಲ್ಲಿ ಶಾರ್ಜಾಕ್ಕೆ ಪ್ರಯಾಣ ಬೆಳೆಸಿದರು.
(ಇದನ್ನೂ ಓದಿ: ಅಧಿಕಾರ ಇದ್ದಾಗಲೂ ಚಾಮರಾಜನಗರಕ್ಕೆ ಬರದ ಬಿಎಸ್ವೈ ಈಗಲೂ ಇತ್ತ ಸುಳಿಯುತ್ತಿಲ್ಲವೇಕೆ!?)