ಮಂಗಳೂರು : ರಾಜ್ಯ ಸರ್ಕಾರ ಮಂಡಿಸಿರುವ ಮತಾಂತರ ನಿಷೇಧ ಕಾಯ್ದೆ ಮತ್ತು ಕೇಂದ್ರ ಸರ್ಕಾರ ಮಂಡಿಸಿದ ಮಹಿಳೆಯರ ಮದುವೆ ವಯಸ್ಸನ್ನು 21 ಕ್ಕೇರಿಸಿರುವುದು ಗೊಂದಲಕಾರಿಯಾಗಿದೆ ಎಂದು ಮಾಜಿ ಸಚಿವ ಯು. ಟಿ. ಖಾದರ್ ಹೇಳಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತರಾತುರಿಯಲ್ಲಿ ಮಂಡಿಸಿದ ಮತಾಂತರ ನಿಷೇಧ ಕಾಯ್ದೆ ಗೊಂದಲಕಾರಿಯಾಗಿದೆ. ಬಿಜೆಪಿಯವರಿಗೆ ಈ ಕಾಯ್ದೆಗೆ ತಡೆಯಾಜ್ಞೆ ಸಿಗಲಿದೆ. ಚುನಾವಣಾ ಲಾಭಕ್ಕೋಸ್ಕರ ಜನರಲ್ಲಿ ಗೊಂದಲ ಸೃಷ್ಟಿಸುವುದೇ ಇವರ ಉದ್ದೇಶ ಎಂದರು.
21 ಕಾಯಬೇಕು : ಇನ್ನೂ ಮಹಿಳೆಯರ ಮದುವೆ ವಯಸ್ಸು ಹೆಚ್ಚಿಸಿರುವ ವಿಚಾರದಲ್ಲಿ ಗೊಂದಲವಿದೆ. ಮನೆಯವರು ಸಂಬಂಧ ನೋಡಿ ಮದುವೆ ಮಾಡಲು 21 ವರ್ಷ ಕಾಯಬೇಕು. ಆದರೆ ಲಿವಿಂಗ್ ಟುಗೆದರ್ಗೆ 18 ವರ್ಷದಲ್ಲಿ ಅವಕಾಶವಿದೆ. ಇದು ಕೂಡ ಗೊಂದಲಕಾರಿ ಎಂದು ಹೇಳಿದರು.
ಬಿಜೆಪಿ ಎಂಇಎಸ್ ಪಾರ್ಟನರ್ : ಬೆಳಗಾವಿ ಗಲಾಟೆ ವಿಚಾರದಲ್ಲಿ ಕನ್ನಡಪರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಒಂದು ಭಾಷೆಗೆ ಗೌರವ ನೀಡಿ ನಮ್ಮ ಭಾಷೆಯನ್ನು ಬೆಳೆಸಬೇಕು. ನಮ್ಮ ಭಾಷೆ ಕಲಿಯುವ ಜೊತೆಗೆ ಬೇರೆ ಭಾಷೆ ಕಲಿಯಬೇಕು. ಎಂಇಎಸ್ ಬಗ್ಗೆ ಬಿಜೆಪಿಗೆ ಹೆಚ್ಚಾಗಿ ಗೊತ್ತಿದೆ. ಅವರು ಚುನಾವಣೆಯಲ್ಲಿ ಪಾರ್ಟನರ್ ಆಗಿದ್ದವರು. ಬಂದ್ಗೆ ಬೆಂಬಲಿಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ತಿಳಿಸುತ್ತಾರೆ ಎಂದರು.