ಸುಳ್ಯ/ಮಂಗಳೂರು: ದಕ್ಷಿಣ ಜಿಲ್ಲೆಯ ಸುಳ್ಯದಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ಲಾರಿ ಕೆಳಗೆ ಜಂಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದರೆ, ಆಟವಾಡುತ್ತಿದ್ದ ಬಾಲಕನ ಪ್ರಾಣವನ್ನು ಟಿಪ್ಪರ್ ಲಾರಿಯೊಂದು ಬಲಿ ಪಡೆದಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಮೈ ಜುಮ್ಮೆನ್ನಿಸುವ ಘಟನೆ: ಚಲಿಸುತ್ತಿರುವ ಲಾರಿಯಡಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಭಯಾನಕ ಘಟನೆ ಸುಳ್ಯದ ಗಾಂಧಿನಗರ ಬಳಿ ನಡೆದಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಯುವಕ ನೀರಿನಲ್ಲಿ ಡೈವ್ ಹೊಡೆಯುವ ಹಾಗೆಯೇ ಲಾರಿ ಹಿಂಬದಿ ಕೆಳಗೆ ಹಾರಿದ್ದಾನೆ. ಇದನ್ನು ಗಮನಿಸಿದ್ದ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಓದಿ: ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ಸಾವು
ಪ್ರಾಥಮಿಕ ಮಾಹಿತಿ ಪ್ರಕಾರ ಗಾಯಾಳು ಸುಳ್ಯದ ಗಾಂಧಿನಗರದಲ್ಲಿ ವಾಸವಿರುವ ಹಾವೇರಿ ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗದ ಕಾರಣ ಪೊಲೀಸರು ಈತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬಾಲಕ ಸಾವು: ಟಿಪ್ಪರ್ ಲಾರಿಯೊಂದು ಹರಿದ ಪರಿಣಾಮ ಆರು ವರ್ಷದ ಬಾಲಕ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಗಳೂರು ನಗರದ ಹೊರವಲಯದ ಬಜಾಲ್ ಎಂಬಲ್ಲಿನ ಕಟ್ಟಪುಣಿ ಎಂಬಲ್ಲಿ ನಡೆದಿದೆ. ಬಜಾಲ್ ಹಟ್ಟಿ ನಿವಾಸಿ ಹಿದಾಯುತ್ತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್(6) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಬಾಲಕ ಮೊಹಮ್ಮದ್ ಜೀಶನ್ ಸಂಜೆ ಆರು ಗಂಟೆಯ ಸುಮಾರಿಗೆ ಇಲ್ಲಿನ ಕೋಡ್ದಬ್ಬು ದೈವಸ್ಥಾನ ಬಳಿಯಿದ್ದ ರಸ್ತೆಯ ಬಳಿ ಸೈಕಲ್ನಲ್ಲಿ ಆಟವಾಡುತ್ತಿದ್ದ. ಈ ಸಂದರ್ಭ ಅಲ್ಲಿಗೆ ಬಂದ ಟಿಪ್ಪರ್ ಸೈಕಲ್ನಲ್ಲಿ ಆಡುತ್ತಿದ್ದ ಬಾಲಕನ ಮೇಲೆಯೇ ಹರಿದಿದೆ. ಪರಿಣಾಮ ಜೀಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.