ಮಂಗಳೂರು: ಪೋಷಕರು ಬಂದು ಕರೆದುಕೊಂಡು ಹೋಗುವ ಮುಂಚೆಯೇ ಇಬ್ಬರು ಬಾಲಕರು ಬಾಲ ಮಂದಿರದಿಂದ ಪರಾರಿ ಆಗಿರುವ ಘಟನೆ ನ.28 ರಂದು ನಗರದ ಬೋಂದೆಲ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಬಾಲಕರಿಗಾಗಿ ಪತ್ತೆ ಕಾರ್ಯಾಚರಣೆ ನಡೆದಿದೆ.
ಸ್ಯಾಮುವೆಲ್ ಟೊಪ್ಪು(16) ಮತ್ತು ವಡಲಮನಿ ಚಿರಂಜೀವಿ(16) ನಾಪತ್ತೆಯಾದ ಬಾಲಕರು. ಈ ಇಬ್ಬರು ಬಾಲಕರ ಇತ್ತೀಚೆಗೆ ಪತ್ತೆಯಾಗಿದ್ದರು. ಅವರ ಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಪೋಷಕರು ಬಂದು ಕರೆದುಕೊಂಡು ಹೋಗುವ ಮುಂಚೆಯೇ ಮತ್ತೆ ನಾಪತ್ತೆಯಾಗಿದ್ದಾರೆ.
ಘಟನೆಯ ವಿವರ: ವಡಲಮನಿ ಚಿರಂಜೀವಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಬಂದರಿನಿಂದ ಹಡಗಿನಲ್ಲಿ ಮಂಗಳೂರಿಗೆ ಬಂದಿದ್ದ. ಈತ ವಿಶಾಖಪಟ್ಟಣ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಡಗಿನೊಳಗೆ ಆಕಸ್ಮಿಕವಾಗಿ ಹೋಗಿದ್ದ. ಕಲ್ಲಿದ್ದಲು ತುಂಬಿಕೊಂಡು ಮಂಗಳೂರಿಗೆ ಬಂದಿದ್ದ ಹಡಗಿನಲ್ಲಿ ಬಾಲಕನಿರುವುದು ಪತ್ತೆಯಾಗಿತ್ತು. ಹಡಗು ಸಿಬ್ಬಂದಿ ಕರಾವಳಿ ಕಾವಲು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಆಕಸ್ಮಿಕವಾಗಿ ಹಡಗಿನ ಒಳಗೆ ಹೋಗಿದ್ದನ್ನು ಮತ್ತು ನಿದ್ದೆ ಬಂದದ್ದನ್ನು ತಿಳಿಸಿದ್ದಾನೆ. ಈತನನ್ನು ಬಾಲಮಂದಿರದಲ್ಲಿ ಇಟ್ಟು ಮನೆಯವರಿಗೆ ತಲುಪಿಸಲು ಸಿದ್ಧತೆ ನಡೆದಿತ್ತು.
ಛತ್ತಿಸಗಡದ ಸ್ಯಾಮುವಲ್ ಟೊಪ್ಪು ಸುರತ್ಕಲ್ನ ಮೀನು ಸಂಸ್ಕರಣ ಘಟಕದಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗ ಅಕ್ಟೋಬರ್ನಲ್ಲಿ ಪತ್ತೆಯಾಗಿದ್ದ. ಕಾರ್ಮಿಕ ಇಲಾಖೆಯವರು ಪತ್ತೆ ಹಚ್ಚಿ ಈತನನ್ನು ಬಾಲಮಂದಿರದಲ್ಲಿ ಇರಿಸಿದ್ದರು. ಈತನನ್ನು ಕರೆದುಕೊಂಡು ಹೋಗಲು ಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಪಾಲಕರು ಬಂದು ಕರೆದುಕೊಂಡು ಹೋಗುವ ಮುಂಚೆಯೇ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.