ಮಂಗಳೂರು : ನಗರದ ಸುರತ್ಕಲ್ ಟೋಲ್ ಗೇಟ್ ಬಳಿ ಪ್ರತಿಭಟನಾನಿರತ ಸಾಮಾಜಿಕ ಕಾರ್ಯಕರ್ತರೋರ್ವರೊಂದಿಗೆ ಅಸಭ್ಯವಾಗಿ ವರ್ತಿಸಿ, ಹಲ್ಲೆಗೆತ್ನಿಸಿದ ಆರು ಮಂದಿ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ. ವಾಸವಿಗೌಡ, ಲಿಪಿಕಾ, ಹಿಮಾ, ಆದ್ಯಾ, ಮಾಯಾ ಮತ್ತು ಮೈತ್ರಿ ಎಂಬುವರು ಬಂಧಿತ ಮಂಗಳಮುಖಿಯರು.
ದ.ಕ. ಜಿಲ್ಲೆಯಲ್ಲಿ 'ಆಪದ್ಬಾಂಧವ' ಎಂದೇ ಖ್ಯಾತಿ ಪಡೆದಿರುವ 'ಆಪದ್ಬಾಂಧವ' ಆಸೀಫ್ ಅವರು ಸುರತ್ಕಲ್ ಬಳಿಯಿರುವ ಅನಧಿಕೃತ ಎನ್ಐಟಿಕೆ ಟೋಲ್ ತೆರವು ಮಾಡಬೇಕೆಂದು ಕಳೆದ ಫೆ.7ರಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ, ನಿನ್ನೆ ಮಧ್ಯರಾತ್ರಿ 12.30 ಸುಮಾರಿಗೆ ಆರು ಮಂದಿ ಮಂಗಳಮುಖಿಯರು ಏಕಾಏಕಿ ಆಸೀಫ್ ಅವರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಅವರು ಬಟ್ಟೆಗಳನ್ನು ಎತ್ತಿ ತಮ್ಮ ಖಾಸಗಿ ಭಾಗವನ್ನು ತೋರಿಸಿದ್ದಲ್ಲದೆ, ಆಸೀಫ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ತಕ್ಷಣ ಆಸೀಫ್ ಅವರು ಈ ಬಗ್ಗೆ ಫೇಸ್ ಬುಕ್ ಲೈವ್ ಮೂಲಕ ಮಂಗಳಮುಖಿಯರ ಕೃತ್ಯದ ಬಗ್ಗೆ ಖಂಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿರುವ ಮಂಗಳಮುಖಿಯರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಬಗ್ಗೆ ಕ್ರಮಕೈಗೊಂಡ ಪೊಲೀಸರು, ಆರು ಮಂದಿ ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಇವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 506ರಡಿ ಪ್ರಕರಣ ದಾಖಲಾಗಿದೆ.
ಓದಿ : ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ತೀವ್ರ ವಿರೋಧ : 3 ಗಂಟೆಗೆ ಸದನ ಮುಂದೂಡಿದ ಸ್ಪೀಕರ್