ಪುತ್ತೂರು: ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿದ್ದ ಡಾ. ಗಾನಾ ಪಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ, ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಆ.19 ರಂದು ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ.
2020ರ ಸೆಪ್ಟಂಬರ್ ತಿಂಗಳಿನಲ್ಲಿ ಡಾ. ಗಾನಾ ಪಿ ಕುಮಾರ್ ಅವರು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸರಿ ಸುಮಾರು ಎರಡು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಪುತ್ತೂರು ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕವಾಗಿರುವ ವೀರಯ್ಯ ಹಿರೇಮಠ ಅವರು ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಿ ತಿಂಗಳ ಹಿಂದೆಯಷ್ಟೇ ಸಿಐಡಿಗೆ ತಾತ್ಕಾಲಿಕವಾಗಿ ನಿಯುಕ್ತಿಗೊಂಡಿದ್ದರು. ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾನಿರೀಕ್ಷಕರ ಪರವಾಗಿ ಡಾ. ಎಂ ಎ ಸಲೀಂ ಐಪಿಎಸ್ ಅವರು ಈ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಎಡಪಂಥೀಯರ ದುಷ್ಟ ಕಾರ್ಯಕ್ಕೆ ಬ್ರೇಕ್ ಹಾಕಲು ವಿಶೇಷ ತಂಡ ರಚಿಸಿದ ರಾಜ್ಯ ಪೊಲೀಸ್ ಇಲಾಖೆ
ಡಾ.ಗಾನಾ ಪಿಕುಮಾರ್ ಪುತ್ತೂರು ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯು ಪೊಲೀಸ್ ಇಲಾಖೆಗೆ ಬಹಳಷ್ಟು ಸವಾಲಿನಿಂದ ಕೂಡಿತ್ತು. ಕಾಲೇಜ್ – ವಿದ್ಯಾಸಂಸ್ಥೆಗಳಲ್ಲಿ ನಡೆದ ವಿವಾದ ಹಾಗೂ ಹೊಡೆದಾಟಗಳು, ರಾಜಕೀಯ ಪ್ರಭಾವಗಳಿದ್ದ ಹಲವು ಹತ್ಯೆ ಪ್ರಕರಣಗಳು, ಮತೀಯ ಸಂಘರ್ಷಗಳು, ನೈತಿಕ ಪೊಲೀಸ್ ಗಿರಿ ಹಾಗೂ ಸ್ವತಃ ಪೊಲೀಸ್ ಸಿಬ್ಬಂದಿಯೇ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡ ಪ್ರಕರಣಗಳು ಇದೇ ಅವಧಿಯಲ್ಲಿ ನಡೆದಿದ್ದವು.
ನೆಲ್ಯಾಡಿಯ ಸಮೀಪ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆಗೆ ದಾಳಿ ಮಾಡುವ ಮೂಲಕ ಹೆಚ್ಚು ಪ್ರಚಾರಕ್ಕೆ ಬಂದ ಗಾನಾ ಅವರು ಪ್ರಕರಣಗಳನ್ನು ನಿಭಾಯಿಸುವಾಗ ಆರಂಭದ ದಿನಗಳಲ್ಲಿ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು.
ಇದನ್ನೂ ಓದಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳು ಎನ್ಐಎ ವಶಕ್ಕೆ
ಈ ಮಧ್ಯೆ ಹಿಂದೂತ್ವವಾದಿ ಸಂಘಟನೆಯೊಂದರ ಕೆಂಗಣ್ಣಿಗು ಗುರಿಯಾಗಿದ್ದರು. ಸಂಘಟನೆಯ ಕಾರ್ಯಕರ್ತನೊಬ್ಬನ ಮೇಲೆ ಸುಖಾಸುಮ್ಮನೆ ರೌಡಿ ಶೀಟರ್ ತೆರೆದಿದ್ದಾರೆ ಎಂಬ ಆರೋಪ ರಾಜ್ಯ ಗೃಹ ಸಚಿವರವರೆಗೂ ತಲುಪಿತು. ಈ ಬಗ್ಗೆ ಅವರ ವಿರುದ್ಧ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಅದಾಗಿ ಸರಿ ಸುಮಾರು ವರ್ಷವೇ ಕಳೆದಿದ್ದು, ಇದೀಗ ವರ್ಗಾವಣೆಗೊಂಡಿದ್ದಾರೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದೆರಡು ವರ್ಷಗಳಿಂದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಇದೀಗ ವರ್ಗಾವಣೆ ಮಾಡಲಾಗಿದೆ.