ಉಳ್ಳಾಲ (ದಕ್ಷಿಣ ಕನ್ನಡ): ಕಳ್ಳತನದ ಆರೋಪಿಯನ್ನು ಹಿಡಿಯಲು ತೆರಳಿದ್ದ ಪೊಲೀಸ್ಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಎಸ್ಐ ಶರಣಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಲೆಬಾಳುವ ವಾಚ್ ಕಳ್ಳತನದ ಆರೋಪಿಯು ಪಾವೂರಿನಲ್ಲಿರುವ ಅವನ ಅತ್ತೆ ಮನೆಯಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದರು.
ಈ ವೇಳೆ ಆತ ಎಸ್ಐ ಶರಣಪ್ಪ ಅವರ ಮೇಲೆ ಚೂರಿಯಿಂದ ಇರಿದಿದ್ದಾನೆ. ಬೆಲೆಬಾಳುವ ವಾಚ್ ಅನ್ನು ಅಂಗಡಿಯೊಂದಕ್ಕೆ ಮಾರಾಟ ಮಾಡಲು ತೆರಳಿದ್ದ ಮಾಹಿತಿಯನ್ನು ಅಂಗಡಿ ಮಾಲೀಕರು ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ಆಧಾರದಲ್ಲಿ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದಾಗ ಬಂದರು ಠಾಣಾ ಪೊಲೀಸ್ ಸಿಬ್ಬಂದಿ ವಿನೋದ್ ಮತ್ತು ಪ್ರವೀಣ್ ಎಂಬುವರ ಮೇಲೆಯೂ ಹಲ್ಲೆ ಮಾಡಿದ್ದ. ವಿನೋದ್ ಅವರಿಗೆ ಚೂರಿ ಇರಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ.
ಇದನ್ನೂ ಓದಿ: ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಕಳ್ಳತನದ ಆರೋಪಿ ಪರಾರಿ
ಆ ಬಳಿಕ ಆತ ಪಾವೂರಿನ ಅತ್ತೆ ಮನೆಯಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ಎಸ್ ಐ ಶರಣಪ್ಪ ಹಾಗೂ ಸಿಬ್ಬಂದಿ ಬುಧವಾರ ದಾಳಿ ಮಾಡಿದ್ದಾರೆ. ಆರೋಪಿ ಎಸ್ ಐ ಶರಣಪ್ಪ ಅವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರುವ ಶರಣಪ್ಪ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.