ಮಂಗಳೂರು : ಇತ್ತೀಚೆಗಷ್ಟೆ ಸಂಶಯಾಸ್ಪದ ಸ್ಯಾಟಲೈಟ್ ಫೋನ್ ಕರೆಗಳು ಕರಾವಳಿ, ಮಲೆನಾಡು ಭಾಗದಲ್ಲಿ ಸಂಪರ್ಕಗೊಂಡಿವೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮುಂಬರುವ ಉತ್ಸವ ದಿನಗಳಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಹೈಅಲರ್ಟ್ ಇರುವಂತೆ ಕೇಂದ್ರ ಗುಪ್ತಚರ ಇಲಾಖೆ ಪೊಲೀಸರಿಗೆ ಮುನ್ಸೂಚನೆ ನೀಡಿದೆ ಎನ್ನಲಾಗಿದೆ.
ಕರಾವಳಿಯನ್ನು ಕೇಂದ್ರವಾಗಿರಿಸಿ ಲಂಚ್ ಬಾಕ್ಸ್ ಬಾಂಬ್ ಸ್ಫೋಟಗೊಳಿಸುವುದಕ್ಕೆ ಉಗ್ರ ಸಂಘಟನೆಗಳು ಸಂಚು ನಡೆಸುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಐಎಸ್‌ಐ ಉಗ್ರ ಸಂಘಟನೆಯು ಈ ಕೃತ್ಯದ ಹಿಂದಿದೆ. ಇದರ ರಹಸ್ಯ ಸಿದ್ಧತೆಗಳು ನಡೆಯುತ್ತಿರುವುದಾಗಿ ವರದಿಗಳು ತಿಳಿಸಿದ್ದು, ಪೊಲೀಸರು ಕಟ್ಟೆಚ್ಚರದಲ್ಲಿರುವಂತೆ ಸೂಚಿಸಿದೆ.
ಮುಂದಿನ ದಿನಗಳಲ್ಲಿ ನವರಾತ್ರಿ, ದೀಪಾವಳಿ ಹೀಗೆ ಪ್ರಮುಖ ಹಬ್ಬಗಳು ಬರುತ್ತಿವೆ. ಈ ಸಮಯದಲ್ಲಿ ಹೆಚ್ಚು ಜನಸಂದಣಿ ಇರುವುದನ್ನು ನೋಡಿಕೊಂಡು ಲಂಚ್ ಬಾಕ್ಸ್‌ಗಳಲ್ಲಿ ಸ್ಫೋಟಕವನ್ನಿರಿಸಿ ವಿಧ್ವಂಸಕ ಕೃತ್ಯ ನಡೆಸುವ ಗುರಿಯನ್ನು ಉಗ್ರ ಸಂಘಟನೆ ಹೊಂದಿದೆ ಎನ್ನಲಾಗಿದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕೆಲ ದಿನಗಳ ಹಿಂದೆಯಷ್ಟೇ ಪಂಜಾಬ್‌ನ ಅಮೃತಸರದ ಬಳಿ ಟಿಫಿನ್ ಬಾಕ್ಸ್‌ನಲ್ಲಿ 2 ಕೆಜಿ ಆರ್‌ಡಿಎಕ್ಸ್ ತುಂಬಿ ಇರಿಸಿದ್ದ ಪ್ರಕರಣ ಪತ್ತೆಯಾಗಿತ್ತು. ಕರಾವಳಿಯಲ್ಲೂ ಇದೇ ಮಾದರಿಯ ಕೃತ್ಯ ಎಸಗಲು ಸ್ಕೆಚ್ ಹಾಕುತ್ತಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಜೊತೆಗೆ ಎಲ್ಲಾ ದೊಡ್ಡ, ಸಣ್ಣ ಬಂದರುಗಳು, ಮೀನುಗಾರಿಕಾ ಜೆಟ್ಟಿಗಳಲ್ಲೂ ಭದ್ರತೆ ಒದಗಿಸುವ ಅವಶ್ಯಕತೆ ಇದೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.
ಮಂಗಳೂರು ಡಿಸಿಪಿ ಹೇಳಿಕೆ:
ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಮಾತನಾಡಿ, ಈ ಬಗ್ಗೆ ತಮಗೇನು ಹೈಅಲರ್ಟ್ ಘೋಷಣೆಯ ಯಾವ ಮಾಹಿತಿಯು ಬಂದಿಲ್ಲ ಎಂದು ಹೇಳಿದ್ದಾರೆ.