ಮಂಗಳೂರು(ದಕ್ಷಿಣಕನ್ನಡ): ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರು ತಮ್ಮ ಚಿಕಿತ್ಸೆಗಾಗಿ ಬ್ಯಾಂಕ್‌ನಲ್ಲಿ ಮಾಡಿದ್ದ ಸಾಲ ತೀರಿಸುವ ಮೂಲಕ 'ಟೀಂ ಬಿ ಹ್ಯೂಮನ್' ತಂಡ ಮಾನವೀಯತೆ ಮೆರೆದಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪುಷ್ಪಕಿರಣ್ (51) ಎಂಬುವವರಿಗೆ ಗ್ಯಾಂಗ್ರಿನ್ ಉಂಟಾಗಿದ್ದರಿಂದ ಮೊಣಕಾಲಿನ ಕೆಲಭಾಗವನ್ನು ಕತ್ತರಿಸಲಾಗಿತ್ತು. ಸೋಮೇಶ್ವರದ ರೆಸಾರ್ಟ್‌ವೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಇವರ ಪತ್ನಿ ರೇಖಾ, ಪತಿಯ ಚಿಕಿತ್ಸೆಗಾಗಿ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂದೇಶವನ್ನು ಗಮನಿಸಿದ ‘ಟೀಂ ಬಿ ಹ್ಯೂಮನ್’ ತಂಡವು ಬ್ಯಾಂಕ್‌ನಲ್ಲಿ ಮಾಡಿದ್ದ 40 ಸಾವಿರ ರೂ. ಸಾಲ ತೀರಿಸಲು ಚೆಕ್ ನೀಡಿ ಪುಷ್ಪಕಿರಣ್-ರೇಖಾ ದಂಪತಿಗೆ ನೆರವಾಗಿದೆ.
ಸದ್ಯ, ಪುಷ್ಪಕಿರಣ್‌ಗೆ ದುಡಿಯಲು ಸಾಧ್ಯವಿಲ್ಲ. ಹೀಗಾಗಿ ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಟೀಂ ಬಿ ಹ್ಯೂಮನ್ ತಂಡವನ್ನ (ಮೊ.ಸಂ.: 9880012388) ಸಂಪರ್ಕಿಸಬಹುದಾಗಿದೆ.