ನೆಲ್ಯಾಡಿ: ವಿದ್ಯಾರ್ಥಿಗಳೇ ಪ್ರಾಂಶುಪಾಲರು, ಅಧ್ಯಾಪಕರಾಗಿ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಶಾಲೆ ನಿಯಂತ್ರಣ ಮಾಡಿದ ಘಟನೆ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ(Nellyadi jnanodaya Bethany Institute) ನಡೆಯಿತು.
ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಆಶಯವನ್ನಿಟ್ಟುಕೊಂಡು ಆರಂಭವಾದ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಾಳೆ ಮಕ್ಕಳ ದಿನಾಚರಣೆ (Children's Day) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಇಂದು ವಿನೂತನ ಕಾರ್ಯಕ್ರಮವೊಂದನ್ನು ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಹೌದು, ಇಂದು ಶಾಲೆಯನ್ನು ಪೂರ್ತಿಯಾಗಿ ಮಕ್ಕಳೇ ನಿಯಂತ್ರಿಸಿದರು. ಪ್ರಾಂಶುಪಾಲರಾಗಿ ಶಮಂತ್ ಕೃಷ್ಣ ಎಂಬ ವಿದ್ಯಾರ್ಥಿ ಅಧಿಕಾರ ತೆಗೆದುಕೊಂಡರೆ, ಪಾಠ ಮಾಡಲು ಅಭಿರುಚಿ ಇರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಧ್ಯಾಪಕರುಗಳಾದರು. ಇವರಲ್ಲಿ ಕೆಲವು ವಿದ್ಯಾರ್ಥಿನಿಯರು ಟೀಚರ್‌ಗಳಂತೆ ಸೀರೆಯುಟ್ಟು ಪಾಠ ಮಾಡಿದರು.
ಇದಕ್ಕೂ ಮುನ್ನ ನೆಹರು ಭಾವಚಿತ್ರ ಹಿಡಿದು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಈ ವೇಳೆ, ಮಕ್ಕಳಿಗೆ ಪ್ರಾಂಶುಪಾಲರು, ಅಧ್ಯಾಪಕರು, ಶಾಲಾ ಆಡಳಿತ ಮಂಡಳಿ ಬೇಕಾದ ನಿರ್ದೇಶನಗಳನ್ನು ನೀಡಿದರು.