ಮಂಗಳೂರು : ಕೋಮು ಸೌಹಾರ್ದವನ್ನು ಕದಡುವ, ದುಷ್ಕೃತ್ಯಗಳಿಗೆ ಪ್ರಚೋದನೆ ನೀಡುವ ವಿವಿಧ ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ಮೇಲೆ ನಿಗಾವಹಿಸಿ ಸಂಬಂಧಿಸಿದ ಪೊಲೀಸರಿಗೆ ಮಾಹಿತಿ ನೀಡಲೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್' ಘಟಕವೊಂದನ್ನು ಪ್ರಾರಂಭಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಈ ಘಟಕವನ್ನು ಪ್ರಾರಂಭಿಸಲಾಗಿದೆ. 6 ಮಂದಿ ನುರಿತ ತಂತ್ರಜ್ಞರು ಈ ಘಟಕವನ್ನು ನಿರ್ವಹಣೆ ಮಾಡಲಿದ್ದಾರೆ. ಈ ಘಟಕವು, ಆರ್ಗನೈಷೇಷನ್, ಆನ್‌ಲೈನ್ ಮೀಡಿಯಾ, ಇಂಡಿವಿಜ್ವಲ್, ಲಾ ಆ್ಯಂಡ್ ಆರ್ಡರ್ ಎಂಬ ನಾಲ್ಕು ಡೆಸ್ಕ್‌ಗಳನ್ನು ಒಳಗೊಂಡಿದೆ.
ಇದು ವಿವಿಧ ವಾಟ್ಸ್ಆ್ಯಪ್ ಗುಂಪು, ಫೇಸ್ಬುಕ್, ವೆಬ್‌ಸೈಟ್‌ಗಳು, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಆನ್‌ಲೈನ್ ಮೀಡಿಯಾ, ಪತ್ರಿಕಾ ಮಾಧ್ಯಮ, ವಿಶುವಲ್ ಮೀಡಿಯಾಗಳ ಮೇಲೆ ಹದ್ದಿನ ಕಣ್ಣಿರಿಸಲಿದೆ. ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ದಿನದ 24ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.
ಓದಿ : ಸಹಜ ಸ್ಥಿತಿಯತ್ತ ಶಿವಮೊಗ್ಗ.. ಎಂದಿನಂತೆ ಜನ ಜೀವನ..
ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆ ಹಾಗೂ ಇಕನಾಮಿಕ್ ಅಂಡ್ ನಾರ್ಕೊಟಿಕ್ ಪೊಲೀಸ್ ಠಾಣೆಯು ಕೆಲ ತಿಂಗಳ ಹಿಂದೆ ವಿಲೀನಗೊಂಡು ಸೆನ್ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಮಾರ್ಪಾಡಾಗಿತ್ತು. ಇದೀಗ ಪೊಲೀಸ್ ಕಮಿಷನರ್ ಕಚೇರಿಯಲ್ಲಿಯೇ 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್' ಘಟಕ ಪ್ರಾರಂಬಿಸಲಾಗಿದೆ.
ಆದರೆ, ಈ ಎರಡೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿದ್ದು, ಸೆನ್ ಪೊಲೀಸ್ ಠಾಣೆಯು ಸೈಬರ್ ಅಪರಾಧಗಳ ಬಗ್ಗೆ ನಿಗಾವಹಿಸಿದರೆ, 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್' ವಿವಿಧ ಸೋಶಿಯಲ್ ಮೀಡಿಯಾಗಳ ಮೇಲೆ ನಿಗಾವಹಿಸಿ ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಿದೆ.
ಈಗಾಗಲೇ ಈ ಸೆಲ್ ವಿವಿಧ ಧಾರ್ಮಿಕ, ವಿದ್ಯಾರ್ಥಿ, ಮಹಿಳಾ, ಕಾರ್ಮಿಕ, ರಾಜಕೀಯ ಸಂಘಟನೆಗಳ ಸುಮಾರು 1064ಕ್ಕೂ ಅಧಿಕ ಸಾಮಾಜಿಕ ಜಾಲತಾಣಗಳ ಗುಂಪುಗಳ ಮೇಲೆ ನಿಗಾ ಇರಿಸಿದೆ ಎಂದು ವರದಿಯಾಗಿದೆ.