ಪುತ್ತೂರು: ಬೀದಿ ಬದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ 8 ಮಂದಿಯನ್ನು ನಗರದ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಗೆ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ನೇತೃತ್ವದಲ್ಲಿ ಸ್ಥಳಾಂತರ ಮಾಡಲಾಯಿತು.
ಪುತ್ತೂರು ನಗರದ ಎಂ.ಟಿ ರಸ್ತೆಯ ಅಂಗಡಿ ಭಾಗದಲ್ಲಿ ಇವರು ಭಿಕ್ಷೆ ಬೇಡಿ ಹಲವು ವರ್ಷಗಳಿಂದ ಬದುಕುತ್ತಿದ್ದರು. ಕೊರೊನಾ ಲಾಕ್‌ಡೌನ್ ಪರಿಣಾಮ ಇವರಿಗೆ ದಿನದ ತುತ್ತಿಗೂ ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಪುತ್ತೂರು ಮೆಸ್ಕಾಂ ಇಲಾಖೆಯ ಆಶ್ರಫ್ ಅವರ ತಂಡದಿಂದ ದಿನವೂ ಆಹಾರ ನೀಡುವ ಕೆಲಸ ನಡೆಯುತ್ತಿತ್ತು. ಆದರೆ ಮಳೆ ಆರಂಭವಾದ ಹಿನ್ನೆಲೆ ಇವರನ್ನು ಸ್ಥಳಾಂತರ ಮಾಡುವಂತೆ ಪುತ್ತೂರು ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ನಗರಸಭಾ ಪೌರಾಯುಕ್ತರಿಗೆ ತಿಳಿಸಿದ್ದರು.
ಈ ಹಿನ್ನೆಲೆ ಅಲ್ಲಿದ್ದ 8 ಮಂದಿಯನ್ನು ಇದೀಗ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಈ ಶಾಲೆಯ ಒಂದು ಕೋಣೆಯನ್ನು ಇವರಿಗಾಗಿ ತೆರವು ಮಾಡಲಾಗಿದೆ. ನೀರು ಹಾಗೂ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವರಿಗೆ ಊಟ-ಕಾಫಿ ವ್ಯವಸ್ಥೆಯನ್ನು ಮೆಸ್ಕಾಂ ಇಲಾಖೆಯಿಂದ ಮಾಡಲಾಗುವುದು. ಉಳಿದ ಸೌಕರ್ಯಗಳನ್ನು ನಗರಸಭೆ ಆಡಳಿತದ ಮೂಲಕ ಮಾಡಿ ಕೊಡಲಾಗುವುದು ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದರು.