ಬಂಟ್ವಾಳ: ವೃದ್ಧ ಭಿಕ್ಷುಕಿಯೊಬ್ಬರು ದೇವರಿಗೆ ದೇಣಿಗೆ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ. ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಇವರು ಕಳೆದ ಹಲವು ವರ್ಷಗಳಿಂದ ದೇವರಿಗೆ ಕಾಣಿಕೆಯಾಗಿ ನೀಡುತ್ತಾ ಹೃದಯ ಶ್ರೀಮಂತಿಕೆ ಮೆರೆಯುತ್ತಿದ್ದಾರೆ. ಇದೀಗ ಒಂದು ಲಕ್ಷ ರೂಪಾಯಿ ಹಣವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ.
ಈ ವೃದ್ಧ ಮಹಿಳೆಯ ಹೆಸರು ಅಶ್ವತ್ತಮ್ಮ(80). ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಇವರು 'ಭವತೀ ಭಿಕ್ಷಾಂದೇಹಿ' ಎಂಬ ಧ್ಯೇಯವನ್ನಿಟ್ಟುಕೊಂಡು ದೇಗುಲದ ವಠಾರದಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಅದರಿಂದ ಬಂದ ಹಣವನ್ನು ಇದೀಗ ದೇವಳದ ಅನ್ನದಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ವರ್ಷದ ಬಹುತೇಕ ಸಮಯ ಮಾಲಾಧಾರಿ ಆಗಿದ್ದುಕೊಂಡೇ ಅಯ್ಯಪ್ಪ ಸೇವೆ ಮಾಡುತ್ತಿರುವ ಇವರು, ತಮ್ಮ ಕುಟುಂಬದಲ್ಲಿ ಬಡತನವಿದ್ದರೂ ಅದರ ಬಗ್ಗೆ ಚಿಂತೆ ಮಾಡಿದವರಲ್ಲ. ನಿತ್ಯ ದೇವರ ನಾಮಸ್ಮರಣೆಯೊಂದಿಗೆ ಬದುಕುತ್ತಿದ್ದು, ಸದಾ ಧಾರ್ಮಿಕ ಪ್ರಜ್ಞೆಯನ್ನು ತನ್ನೊಳಗೆ ಜೀವಂತವಾಗಿರಿಸಿಕೊಂಡಿದ್ದಾರೆ.
ಪೊಳಲಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಸೇರಿದಂತೆ ಇತರ ಸಮಯದಲ್ಲಿ ಕ್ಷೇತ್ರದಲ್ಲಿ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಶುಕ್ರವಾರ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದರು.
ಇದೇ ಮೊದಲಲ್ಲ: ಪತಿ ಹಾಗೂ ಪುತ್ರ ತೀರಿಕೊಂಡ ನಂತರ ಇವರು ಈ ಹಣ ಸಂಗ್ರಹ ಕೆಲಸ ಆರಂಭಿಸಿದ್ದಾರೆ. ಈ ಅಜ್ಜಿಗೆ ಆರು ಮಂದಿ ಮೊಮ್ಮಕ್ಕಳಿದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5ಲಕ್ಷ ರೂ. ದೇಣಿಗೆಯೊಂದಿಗೆ ಈ ದಾನ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ನಡೆಸಲಾಗಿದೆ. ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳವಾದ ಪಂದಳ ಕ್ಷೇತ್ರದಲ್ಲಿ 30 ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ. ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ ಕಾಣಿಕೆ ಸಮರ್ಪಿಸಿದ್ದರು. ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದರು. ಇದೀಗ ಮತ್ತೆ ಪೊಳಲಿ ದೇವಸ್ಥಾನಕ್ಕೆ 1 ಲಕ್ಷ ರೂ. ನೀಡಿದ್ದಾರೆ.
ಇದನ್ನೂ ಓದಿ: ನೂರಲ್ಲ.. ಸಾವಿರವಲ್ಲ.. ಭಿಕ್ಷೆ ಬೇಡಿ ಬರೋಬ್ಬರಿ 5 ಲಕ್ಷ ಹಣ ದೇವಾಲಯಕ್ಕೆ ದಾನ ನೀಡಿದ ಅಶ್ವತ್ಥಮ್ಮ!