ಮಂಗಳೂರು: ಕ್ಯಾಂಪ್ಕೋಗೆ ವಿದೇಶದಿಂದ ಕೊಕೊ ಬೀನ್ಸ್ ಕಳುಹಿಸುವ ಸಂದರ್ಭ ಸುಮಾರು ರೂ 9.71 ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ವಿನ್ಸಿ ಪಿಂಟೋ ಬಂಧಿತ ಆರೋಪಿ. 2018-19ರಲ್ಲಿ ಕ್ಯಾಂಪ್ಕೋ ಸಂಸ್ಥೆಯು ಮಂಗಳೂರಿನ ಜೀವನ್ ಲೋಬೋ ಮಾಲೀಕತ್ವದ ಕೋಸ್ಪಾಕ್ ಏಶಿಯಾ ಇಂಟರ್ ನ್ಯಾಶನಲ್ ಸಂಸ್ಥೆಯ ಮೂಲಕ ವಿದೇಶದಿಂದ ಕೊಕ್ಕೋ ಬೀಜ ಖರೀದಿಗೆ ಷರತ್ತುಬದ್ದ ಖರೀದಿ ಆದೇಶವನ್ನು ನೀಡಿತ್ತು. ಅದರಂತೆ ಜೀವನ್ ಲೋಬೋ ವಿನ್ಸಿ ಪಿಂಟೋರವರ ಸಹ ಮಾಲಿಕತ್ವದಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಬೀಜವನ್ನು ಸರಬರಾಜು ಮಾಡಿದ್ದಾರೆ.
2019ನೇ ಇಸವಿಯಲ್ಲಿ ಸೀಮಾ ಸುಂಕ, ತೆರಿಗೆ, ಜಿಎಸ್‌ಟಿ ತೆರಿಗೆ ಇತ್ಯಾದಿಗಳನ್ನು ಸಮರ್ಪಕವಾಗಿ ಪಾವತಿಸದೆ ಕೊಕ್ಕೋ ಬೀಜಗಳನ್ನು ನೀಡಿದ್ದಾರೆ. ಅದಲ್ಲದೇ ಆಫ್ರೀಕಾದ ಕೊಕ್ಕೋವನ್ನು ಥಾಯಿಲೆಂಡ್ನದ್ದು ಎಂದು ಕ್ಯಾಂಪ್ಕೋ ಸಂಸ್ಥೆಗೆ ಮಾರಾಟ ಮಾಡಿದ್ದರು.
ಇದರಿಂದಾಗಿ ಕ್ಯಾಂಪ್ಕೋ ಸಂಸ್ಥೆಗೆ ರೂ 9,71,50,113 ನಷ್ಟ ಉಂಟಾಗಿತ್ತು. ಪ್ರಕರಣ ದಾಖಲಾದ ಬಳಿಕ ಆರೋಪಿಗಳಾದ ಜೀವನ್ ಲೋಬೋ ಮತ್ತು ವಿನ್ಸಿ ಪಿಂಟೋ ತಲೆಮರೆಸಿಕೊಂಡಿದ್ದರು.
ತಲೆಮರೆಸಿಕೊಂಡಿದ್ದ ಆರೋಪಿ ವಿನ್ಸಿ ಪಿಂಟೋ ಎಂಬವನ ವಿರುದ್ದ ಲುಕ್ ಔಟ್ ನೋಟೀಸ್ ನೀಡಲಾಗಿತ್ತು. ಈತ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಹೊರಡಿಸಿದ ಲುಕ್ ಔಟ್ ನೋಟೀಸ್ ಆಧಾರದಲ್ಲಿ ಇಮೀಗ್ರೇಶನ್ ಅಧಿಕಾರಿಗಳು ಮಾ. 8 ರಂದು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿ ಪುತ್ತೂರಿಗೆ ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಿಗೂಢ ಸ್ಫೋಟ: ಓರ್ವ ಸಾವು, 14 ಮಂದಿಗೆ ಗಾಯ