ಮಂಗಳೂರು : ಜನವರಿ 4 ರಂದು ಎನ್ಆರ್‌ಸಿ ಹಾಗೂ ಸಿಎಎ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಯಾವ ಯುವಕರು ಕಾನೂನು ಕೈಗೆತ್ತಿಕೊಳ್ಳುತ್ತಾರೋ ಅವರಿಗೆ ಈ ಮಣ್ಣಿನಲ್ಲಿರುವ ಹಕ್ಕಿಲ್ಲ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಖಡಕ್ ಆಗಿ ಸೂಚನೆ ಕೊಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಈ ಆರು ತಿಂಗಳ ಒಳಗೆ ಮುಸ್ಲಿಮರ ವಿರುದ್ಧ ಅನೇಕ ಕಾನೂನುಗಳು ಜಾರಿಗೊಂಡರೂ ನಾವು ಪ್ರತಿಭಟನೆ ನಡೆಸಲಿಲ್ಲ. ಆದರೆ ಎನ್ಆರ್‌ಸಿ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಇಲ್ಲಿಯೇ ಹುಟ್ಟಿದ ಮುಸ್ಲಿಮರ ವಿರುದ್ಧ ಕಾನೂನು ಜಾರಿಗೊಂಡರೆ ಖಂಡಿತ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಎನ್ಆರ್‌ಸಿ ಬರಿ ಮುಸ್ಲಿಮರಿಗೆ ಮಾತ್ರವಲ್ಲ ಆದಿವಾಸಿ, ಹಿಂದುಳಿದ ವರ್ಗಗಳಿಗೂ ಅನ್ವಯಿಸುತ್ತದೆ. ಪಾಸ್‌ಪೋರ್ಟ್ ಮುಗಿದರೂ ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದರೆ ಅಂತಹವರ ವಿರುದ್ಧ ಕಾನೂನು ತರಲಿ. ಆದರೆ ಇಲ್ಲಿಯೇ ಹುಟ್ಟಿದವರನ್ನು ದಾಖಲೆ ಇಲ್ಲವೆಂದು ದೇಶದಿಂದ ಹೊರಕಳಿಸುವವರ ವಿರುದ್ಧ ನಾವು ಖಂಡಿತಾ ಧ್ವನಿ ಎತ್ತಲಿದ್ದೇವೆ ಎಂದು ಮೊಯ್ದಿನ್ ಬಾವಾ ಹೇಳಿದರು.
ಪ್ರತಿಭಟನೆ ನಮ್ಮ ಹಕ್ಕು ಎಂದು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಬಂದವರ ಮೇಲೆ ಲಾಠಿ ಪ್ರಹಾರ ನಡೆಯಿತು. ಲಾಠಿಚಾರ್ಜ್ ಮಾಡಿರುವ ಸಂದರ್ಭದಲ್ಲಿ ಯಾರಾದರೂ ಕಲ್ಲು ಹೊಡೆದಿರಬಹುದು. ಆ ಸಂದರ್ಭದಲ್ಲಿ ಪೊಲೀಸರು ಬಂಧಿಸಬಹುದಿತ್ತು. ಆದರೆ ಗೋಲಿಬಾರ್ ನಡೆಸಿ ಅಮಾಯಕರನ್ನು ಬಲಿ ಪಡೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.