ಮಂಗಳೂರು: ಈ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಯಾವ ಅಭಿವೃದ್ಧಿ ಆಗಿಲ್ಲ ಹೇಳಿ. ಮೋದಿ ಎಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದಾರೆ. ಜನರೂ ಅದನ್ನು ಸ್ವೀಕರಿಸಿದ್ದಾರೆ. ಆದರೆ ಕಾಂಗ್ರೆಸ್ಸಿಗರಿಗೆ ಮಾತ್ರ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುವುದೇ ತಿಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು.
ಇಂದು ಮಂಗಳೂರಿನ ವಿವಿಧ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಬಂದಿದ್ದ ಪ್ರಹ್ಲಾದ್ ಮೋದಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದ ಎಲ್ಲಾ ಜನತೆಗೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಆಸೆ ಇದೆ. ಆದ್ದರಿಂದ ಪ್ರಿಯಾಂಕ ವಾದ್ರಾ ಬರಲಿ, ಪ್ರಿಯದರ್ಶಿನಿ ಬರಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್ಸಿಗರನ್ನು ದೇಶದ ಜನತೆ ಸ್ವೀಕರಿಸಲಾರರು. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನ ಪಡೆದು ದೇಶದ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ಭವಿಷ್ಯ ನುಡಿದರು.
ಮಹಾಘಟಬಂಧನ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾಘಟಬಂಧನ್ ಯಾವತ್ತೂ ಆಗುತ್ತೆ-ಹೋಗುತ್ತೆ. ಈ ಹಿಂದೆಯೂ ಇಂತಹ ಅನೇಕ ಘಟಬಂಧನ್ಗಳನ್ನು ನೋಡಿದ್ದೇವೆ. ಎನ್ಡಿಎ ಸರ್ಕಾರವನ್ನು ಈ ಘಟಬಂಧನ್ ಎಂದೂ ಮುರಿಯಲು ಸಾಧ್ಯವಿಲ್ಲ ಎಂದರು.
ಎನ್ಡಿಎ ಸರ್ಕಾರದಲ್ಲೂ ಮಹಾಘಟಬಂಧನ್ ಇದೆ. ಮೊರಾರ್ಜಿ ದೇಸಾಯಿ, ವಾಜಪೇಯಿ ಘಟಬಂಧನ್ ಎನ್ಡಿಎ ಸರ್ಕಾರದಲ್ಲಿ ಈಗಲೂ ಇದೆ. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ನ ಮಹಾಘಟಬಂಧನ್ ಮುರಿದು ಬೀಳುತ್ತಲೇ ಇದೆ ಎಂದು ಪ್ರಹ್ಲಾದ್ ಮೋದಿ ಹೇಳಿದರು.