ಮಂಗಳೂರು: ಕೆಲ ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಂಗಳೂರು ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಆಕೆಯ ಅಣ್ಣನೇ ಅವಳನ್ನು ಹತ್ಯೆ ಮಾಡಿರುವ ಅಂಶ ತನಿಖೆ ವೇಳೆ ಬಯಲಾಗಿದೆ.
ಮನೆಯಲ್ಲಿ ತಿಂಡಿ ಕೊಡುವಾಗ ಅಣ್ಣನಿಗೆ ಮೊದಲು ಕೊಡದೆ ತಂಗಿಗೆ ಮೊದಲು ಕೊಡುತ್ತಿದ್ದರಂತೆ. ಮೊಬೈಲ್ ಕೂಡ ತಂಗಿಗೆ ಚೆಂದದ್ದು ಸಿಗುತ್ತಂತೆ. ಕಲಿಯುವುದರಲ್ಲಿ ಜಾಣೆಯಿದ್ದಾಳೆ ಎಂದು ಮನೆಯವರ ಪ್ರೀತಿ ಕೂಡಾ ಆಕೆಗೇ ಜಾಸ್ತಿ ಸಿಗುತ್ತಿತ್ತಂತೆ. ಇಂತಹ ಕ್ಷುಲ್ಲಕ ಕಾರಣಗಳಿಗೆ ಸಹೋದರ ತಂಗಿಯನ್ನೇ ಬಲಿ ಪಡೆದ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಮುಡಿಪುವಿನಲ್ಲಿ ಸಹೋದರನಿಂದ ಹತ್ಯೆಯಾದ ಫಿಯೋನ ಸ್ವೀಡಲ್ ಕುಟಿನ್ಹಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ. ಪಿ.ಎಸ್.ಹರ್ಷ, ಈ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಅಣ್ಣನಿಗಿಂತ ತಂಗಿಯನ್ನು ಜಾಸ್ತಿ ಪ್ರೀತಿಸುತ್ತಿದ್ದಾರೆ ಎಂಬ ಭಾವನೆಯಿಂದ ಸ್ವಂತ ತಂಗಿಯನ್ನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಸ್ಯಾಮ್ಸನ್ ಗಾಂಜಾ ವ್ಯಸನಿ. ಆತ ಎಂಜಿನಿಯರಿಂಗ್ ಕಾಲೇಜು ವಿದ್ಯಾಭ್ಯಾಸವನ್ನು ಗಾಂಜಾ ವ್ಯಸನದಿಂದ ಅರ್ಧಕ್ಕೆ ಮೊಟಕುಗೊಳಿಸಿದ್ದ. ಮನೆಯಲ್ಲಿ ಇದ್ದ ಆತನಿಗೆ ತನ್ನ ಬಗ್ಗೆ ಮನೆಯವರಿಗೆ ಕಾಳಜಿ ಇಲ್ಲ ಎಂಬ ಭಾವನೆ ಶುರುವಾಯಿತು. ಇದರಿಂದಾಗಿ ಆತ ಕ್ಷುಲ್ಲಕ ಕಾರಣಕ್ಕಾಗಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಅ. 8ರಂದು ತಂಗಿಯ ಜೊತೆಗೆ ಜಗಳವಾಡಿ ಆಕೆಯ ತಲೆಗೆ ಸುತ್ತಿಗೆಯಿಂದ ಬಡಿದು ಕೊಂದಿದ್ದಾನೆ.
ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಮನೆಯ ಹಿಂದೆ 100 ಮೀಟರ್ ದೂರದಲ್ಲಿರುವ ಪೊದೆಯಲ್ಲಿ ಬಿಸಾಡಿದ್ದಾನೆ. ಘಟನೆಯ ಬಳಿಕ ಮನೆಯವರಿಗೆ ಆಕೆ ಮಂಗಳೂರಿಗೆ ಹೋಗಿರುವುದಾಗಿ ತಿಳಿಸಿದ್ದಾನೆ. ಆದರೆ ಮಂಗಳೂರಿಗೆ ಹೋದವಳು ಮನೆಗೆ ಮರಳಿಲ್ಲ ಎಂದು ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಾಪತ್ತೆ ಪ್ರಕರಣದ ಬೆನ್ನು ಹತ್ತಿ ತನಿಖೆ ನಡೆಸಿದ ಪೊಲೀಸರಿಗೆ ತನಿಖೆಯ ವೇಳೆ ಅಣ್ಣನೇ ತಂಗಿಯನ್ನು ಕೊಂದಿರುವುದು ತಿಳಿದುಬಂದಿದೆ. ಆಕೆಯ ಅಸ್ಥಿ ಪಂಜರ ಸಿಕ್ಕಿದ್ದು, ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಬಳಿಕ ತಲೆನೋವು ಎಂದು ಕೊಲೆ ಆರೋಪಿ ಎರಡು ದಿನ ಮನೆಯಲ್ಲಿ ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಹರ್ಷ ತಿಳಿಸಿದ್ದಾರೆ.