ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದ್ದು, ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಭಾರೀ ಅಸಮಾಧಾನ ಸ್ಫೋಟಗೊಂಡಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಟಿಕೆಟ್ ವಂಚಿತ ಮಾಜಿ ಮೇಯರ್ ಗುಲ್ಜಾರ್ ಬಾನು ಅವರ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಖಾಸಗಿ ಹೋಟೆಲ್ ಮುಂದೆ ಜಮಾಯಿಸಿದರು.
ಕಾಂಗ್ರೆಸ್ ನಾಯಕರು ಹೋಟೆಲ್ನಿಂದ ಹೊರ ಬರುತ್ತಿದ್ದಂತೆ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶದಿಂದ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗುಲ್ಜಾರ್ ಬಾನುಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಎದುರಿಸಬೇಕಾಯಿತು. ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ 58 ಮಂದಿಯ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಇಂದು ಬಿಡುಗಡೆಗೊಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್, 60 ವಾರ್ಡ್ಗಳ ಪೈಕಿ 2ರಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ. ಉಳಿದ 58 ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಮಾಡಲಾಗಿದೆ. ನಾಳೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿಮವಾಗಿರುವುದರಿಂದ ನಾಳೆ ಮುಂಜಾನೆಯೊಳಗೆ ಇದನ್ನು ಅಂತಿಮಗೊಳಿಸಲಾಗುವುದು ಎಂದರು. ಕಳೆದ ಬಾರಿಯ 35 ಸದಸ್ಯರಲ್ಲಿ 19 ಮಂದಿಗೆ ಮಾತ್ರ ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಕಾತಿ ಕಾರಣಕ್ಕಾಗಿ 16 ಮಂದಿಗೆ ಅವಕಾಶ ನೀಡಲಾಗಿಲ್ಲ ಎಂದರು.