ಮಂಗಳೂರು: ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಜನವರಿ 31ಕ್ಕೆ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೆಡಿಪಿ ಸಭೆಯಲ್ಲಿ ದಕ್ಷಿಣಕನ್ನಡ ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸಮಕ್ಷಮ ಹೇಳಿದರು.
ಪಂಪ್ ವೆಲ್ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ತಹಶೀಲ್ದಾರ್ ದಿನವೂ ಅದರ ಮಾಹಿತಿ ನೀಡಬೇಕೆಂದು ಆದೇಶಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್, ತಲಪಾಡಿ ಕಡೆಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಸುರತ್ಕಲ್ ಕಡೆ ಇನ್ನೂ ಬಾಕಿ ಇದೆ. ಜನವರಿ 31ಕ್ಕೆ ಕಾಮಗಾರಿ ಪೂರ್ಣಗೊಳಿಸಿ ಪಂಪ್ ವೆಲ್ ಮೇಲ್ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುವುದು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, 'ನಾನು ಇಂಜಿನಿಯರ್ ಅಲ್ಲದಿದ್ದರೂ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರ್ನಾಲ್ಕು ತಿಂಗಳು ಬೇಕು'. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಮಾಡಲು ಆರಂಭಿಸಿ ಹತ್ತು ವರ್ಷವಾಯಿತು. ಆದರೆ, ಇನ್ನೂ ಪೂರ್ಣವಾಗಿಲ್ಲ ಎಂದರು.
ತಕ್ಷಣ ಮಧ್ಯಪ್ರವೇಶಿಸಿದ ಶಾಸಕ ವೇದವ್ಯಾಸ ಕಾಮತ್, 'ಐವನ್ ಡಿಸೋಜ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪಂಪ್‌ವೆಲ್ ವೃತ್ತದಲ್ಲಿ ಹಿಂದೆ ಇದ್ದ ಕಳಶವನ್ನು ತೆಗೆದದ್ದು 16 ನವೆಂಬರ್ 2016ನೇ ಇಸವಿಯಲ್ಲಿ. ಆದರೆ, ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಜಿಲ್ಲಾಡಳಿತ ಮೇಲುಸ್ತುವಾರಿ ವಹಿಸಿದ ಮೇಲೆ ಬಹಳಷ್ಟು ವೇಗದಲ್ಲಿ ಕಾಮಗಾರಿಯ ನಡೆಯುತ್ತಿದೆ ಎಂದರು.
ಈ ಸಂದರ್ಭ ಟೋಲ್ ನಿಲ್ಲಿಸಿರುವ ಬಗ್ಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಬ್ಬರನ್ನೂ ಸಮಾಧಾನಿಸಲು ಹರಸಾಹಸ ಪಡಬೇಕಾಯಿತು.