ಮಂಗಳೂರು: ಎರಡು ಸಾವಿರ ರೂ. ದೊರೆಯುತ್ತದೆ ಎಂದು ಜನಜಂಗುಳಿ ಸೇರಿದ ಘಟನೆ ಮಂಗಳೂರು ನಗರದ ಕೂಳೂರಿನಲ್ಲಿ ನಡೆದಿದೆ.
ಕೂಳೂರಿನ ಶ್ರೀ ದೇವಿಪ್ರಸಾದ್ ಎಂಬ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್ಗೆ ಹಾಕಲಾಗುತ್ತದೆ ಎಂದು ತಪ್ಪು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸುಮಾರು 600-750 ಮಂದಿಯ ಗುಂಪು ಸರತಿ ಸಾಲಿನಲ್ಲಿ ಸೇರಿತ್ತು. ಯಾಕಾಗಿ ನಿಂತಿದ್ದೀರಿ ಎಂದು ಕೇಳಿದರೆ 'ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ' ಎಂದು ನಿಂತಿದ್ದೇವೆ ಎಂಬ ಉತ್ತರ ಬರುತ್ತಿತ್ತು.
ಮಧ್ಯಾಹ್ನ 11.30ರಿಂದ 3.30ರವರೆಗೆ ಈ ಜನಸಂದಣಿ ಇದ್ದು, ಎಲ್ಲರೂ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ಗಳನ್ನು ಹಿಡಿದುಕೊಂಡು ಸರತಿ ಸಾಲುಗಳಲ್ಲಿ ನಿಂತಿದ್ದರು. ಮಾಹಿತಿ ಪಡೆಯುವವರ ಬಳಿ ಯಾಕಾಗಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ ಎಂದು ಕೇಳಿದರೆ, ನಮಗೆ ಡಿಸಿ ಕಚೇರಿಯಿಂದ ಮಾಹಿತಿ ಪಡೆಯಲು ಹೇಳಿದ್ದಾರೆ. ಆದರೆ ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂಬ ಉತ್ತರ ಬಂತು.
ಬಳಿಕ ಸ್ಥಳಾಕ್ಕಮಿಸಿದ ಕಾರ್ಮಿಕ ಅಧಿಕಾರಿಗಳನ್ನ ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದ್ದರಿಂದ ಅಧಿಕಾರಿಗಳು ಅಲ್ಲಿಂದ ಹೊರಟು ಹೋಗಿದ್ದಾರೆ. ಬಳಿಕ ಕಾರ್ಮಿಕರ ಮಾಹಿತಿ ಪಡೆಯುವವರೂ ಕೂಡಾ ತಮ್ಮ ತಮ್ಮ ಬೈಕ್ ಏರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಒಟ್ಟಿನಲ್ಲಿ 2000 ರೂ. ಸಿಗುತ್ತದೆ ಎಂದು ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ದಾರಿ ಹಿಡಿದ್ದಾರೆ.