ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಸಚಿವರು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಪ್ರಯತ್ನದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಗರ್ಭಗುಡಿಯ ಅಡಿ ಸ್ಥಳವು ಇನ್ನು ಮುಂದೆ ದೇವಸ್ಥಾನದ ಆಸ್ತಿ ಎಂಬುದಾಗಿ ನಮೂದಾಗಿದೆ.
ಹಲವಾರು ವರ್ಷಗಳ ನಂತರ ಸರ್ಕಾರದ ಹೆಸರಿನಲ್ಲಿದ್ದ ದೇವರ ಗರ್ಭಗುಡಿಯ ಜಾಗ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಹೆಸರಲ್ಲಿ ನಮೂದಾಗಿದೆ. ಈ ಹಿಂದೆ ಇಲ್ಲಿನ ಆಸ್ತಿ ಪ್ರಕರಣವು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ನಡುವೆ ಹಲವು ಬೆಳವಣಿಗೆಳೂ ನಡೆದಿದ್ದು, ದೇವಸ್ಥಾನದ ಜಾಗದಲ್ಲಿ ಬೇರೆ ಕೆಲವರ ಹೆಸರು ಸೇರಿಸಲ್ಪಟ್ಟು ಸಮಸ್ಯೆಗಳು ಉಂಟಾಗಿತ್ತು ಎನ್ನಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಅವರ ಮುತುವರ್ಜಿಯಿಂದ ಮತ್ತು ದ.ಕ ಜಿಲ್ಲಾಧಿಕಾರಿಗಳು, ಪುತ್ತೂರು ಸಹಾಯಕ ಆಯುಕ್ತರು, ಕಡಬ ಕಂದಾಯ ಇಲಾಖೆಗಳ ನೇತೃತ್ವದಲ್ಲಿ ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪರಿಶ್ರಮವೂ ಈ ಕೆಲಸ ಪೂರ್ಣಗೊಳಿಸಲು ಸಹಕಾರಿಯಾಗಿತ್ತು.
ಇದನ್ನೂ ಓದಿ: ಜನರ ಗಮನ ಸೆಳೆಯುತ್ತಿದೆ ಮೇಕೆದಾಟು ಪಾದಯಾತ್ರೆ
ಇದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರು ಆರ್‌ಟಿಸಿಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳಿಗೆ ತೊಡಕು ಉಂಟಾಗಿತ್ತು. ಹಲವು ವರ್ಷಗಳ ನಂತರ ಸರ್ಕಾರದ ಆದೇಶದ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಗರ್ಭಗುಡಿಯ ಸುತ್ತು ಪೌಲಿ ನಿರ್ಮಾಣ ಕೆಲಸಕ್ಕೆ ಇದ್ದ ತೊಡಕುಗಳು ನಿವಾರಣೆ ಆಗಿದೆ.