ಮಂಗಳೂರು : ಹುಕ್ಕಾಬಾರ್ ಸಂಸ್ಕೃತಿ ಸಿ ಟಿ ರವಿಯವರದ್ದು, ಅವರೀಗ ಲೂಟಿ ರವಿಯಾಗಿ ಕೋಟಿ ರವಿಯಾಗಿದ್ದಾರೆ. ಅವರ ಚರಿತ್ರೆ ಏನು ಎಂದು ಅವರೊಮ್ಮೆ ನೋಡಿಕೊಳ್ಳಲಿ ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಐವನ್ ಡಿಸೋಜ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲ್ ಮಾಡುತ್ತಿದ್ದ ರವಿ ಅವರ ಇಂದಿನ ಆಸ್ತಿ ಇಂದು ಎಷ್ಟಿದೆ ಎಂದು ನೋಡಿಕೊಳ್ಳಲಿ. ನೆಹರೂ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ಅವರಿಗಿಲ್ಲ ಎಂದರು.
ಸವಲತ್ತು ನೀಡದೆ ಯೋಜನೆ ಹೆಸರು ಬದಲಾಯಿದ್ರೆ ಎನ್ ಬಂತು?: ಹಿಂದಿನ ಯೋಜನೆಗಳ ಹೆಸರು ಬದಲಾವಣೆ ಮಾಡುವ ವಿಚಾರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಕೈಬಿಡಬೇಕು. ದೇಶದಲ್ಲಿ ದ್ವೇಷದ ರಾಜಕಾರಣಕ್ಕೆ ಬಿಜೆಪಿ ನಾಂದಿ ಹಾಡುತ್ತಿದೆ.
ಯಾವುದೇ ಸವಲತ್ತುಗಳನ್ನು ನೀಡದೆ ಬರೀ ಹೆಸರು ಬದಲಾವಣೆಗಳನ್ನು ಮಾಡುವುದು ಒಳ್ಳೆಯ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಮೋದಿಯವರು ಬೇಕಾದಲ್ಲಿ ಸ್ವಿಸ್ ಬ್ಯಾಂಕ್‌ನಿಂದ ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಣ ಹಾಕಿ, ಆ ಯೋಜನೆಗೊಂದು ಹೆಸರು ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಲಸಿಕೆಗೆ ಡಬ್ಲ್ಯೂಹೆಚ್ಒ ಮಾನ್ಯತೆ ಇಲ್ಲವೆ? : ದುಬೈ ಲಸಿಕೆ ಪಡೆದರೆ ಭಾರತೀಯರು ಅಲ್ಲಿ ನೆಲಸಬಹುದಾಗಿದೆ. ಅಂದ್ರೆ ಭಾರತದ ಲಸಿಕೆಗೆ ಡಬ್ಲ್ಯೂಹೆಚ್ಒ ಮಾನ್ಯತೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ವಿದೇಶಾಂಗ ಸಚಿವರು, ಸಂಸತ್ ಸದಸ್ಯರು ಏನು ಮಾಡುತ್ತಿದ್ದಾರೆ. ಈ ಬಗ್ಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾಟಾಚಾರಕ್ಕೆ ಕರ್ಪ್ಯೂ : ದ.ಕ.ಜಿಲ್ಲಾಡಳಿತ ಕಾಟಾಚಾರಕ್ಕೆ ವಾರಾಂತ್ಯ ಕರ್ಫ್ಯೂ ಮಾಡುತ್ತಿದೆ. ಮಧ್ಯಾಹ್ನದವರಗೆ ಎಲ್ಲಾ ವಾಹನಗಳು ಸಂಚಾರ ನಡೆಸುತ್ತಿವೆ. ಅಂಗಡಿ-ಮುಂಗಟ್ಟುಗಳು ತೆರೆದಿರುವುದು ಯಾವ ರೀತಿಯ ವಾರಾಂತ್ಯ ಕರ್ಫ್ಯೂ. ಹೆಸರಿಗೆ ಮಾತ್ರ ಇರುವ ನಾಟಕದ ಕರ್ಫ್ಯೂ. ಈ ಮೂಲಕ ಜಿಲ್ಲಾಡಳಿತ ಸಂಪೂರ್ಣ ವೈಫಲ್ಯವಾಗಿದೆ ಎಂದು ಐವನ್ ಡಿಸೋಜ ಕಿಡಿಕಾರಿದರು.