ಕಾರವಾರ: ಅದೊಂದು ನದಿಯಂಚಿನ ಪುಟ್ಟ ಗ್ರಾಮ. ನೆರೆಯ ಪ್ರವಾಹಕ್ಕೆ ಸಿಲುಕಿ ಐದು ದಿನಗಳ ಹಿಂದೆ ಗ್ರಾಮ ತೊರೆದಿದ್ದ ಜನರಿಗೆ, ಶನಿವಾರ ನೆರೆಯ ಪ್ರಮಾಣ ಸ್ವಲ್ಪ ಕಡಿಮೆಯಾದ ಪರಿಣಾಮ ಗ್ರಾಮಕ್ಕೆ ತೆರಳಿದ ಜನರಿಗೆ ದೊಡ್ಡ ಆಘಾತವೇ ಕಾದಿತ್ತು. ಅಂತದ್ದು ಏನಾಗಿದೆ ಅಂತೀರಾ ಮುಂದೆ ಓದಿ.
ಉತ್ತರಕನ್ನಡ ಜಿಲ್ಲೆ ಎರಡು ವಾರಗಳಿಂದ ಮಳೆಯ ರೌದ್ರವಾತಾರಕ್ಕೆ ಬೆಚ್ಚಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯ ನೂರಾರು ಹಳ್ಳಿಗಳು ಮತ್ತು ಜನರ ಬದುಕೇ ನೀರಿನಲ್ಲಿ ತೇಲುತ್ತಿದೆ. ಆದರೀಗ ಎರಡು ದಿನದಿಂದ ಮಳೆ ಕೊಂಚ ಕಡಿಮೆಯಾಗಿದೆ.
ನೀರು ಇಳಿಯುವುದನ್ನೆ ಕಾದು ಕುಳಿತಿದ್ದ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಡಜೂಗ್ ಭಾಗದ ಜನ, ಶನಿವಾರ ನೆರೆ ಕಡಿಮೆಯಾಗುತ್ತಿದ್ದಂತೆಯೇ ತಮ್ಮ ಆಸ್ತಿಪಾಸ್ತಿಗಳನ್ನು ನೋಡಲು ಅವಸರ ಅವಸರವಾಗಿಯೇ ತೆರಳಿದರು. ಆದರೆ ಅವರಿಗೆ ದೊಡ್ಡ ಮರ್ಮಾಘಾತವೇ ಎದುರಾಗಿತ್ತು. ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಎದುರಾದ ಮುರಿದುಬಿದ್ದ ಮನೆಗಳನ್ನು ನೋಡಿದ ಕುಟುಂಬಸ್ಥರ ಎದೆಯೇ ಒಡೆದು ಹೋಯಿತು.
ಮನೆಗಳು ಮಹಾ ಮಳೆಗೆ ನೆಲಸಮವಾಗಿದ್ದು, ಇದೀಗ ಮುಂದೇನು ಎಂಬ ಚಿಂತೆ ಗ್ರಾಮದವರನ್ನು ಕಾಡತೊಡಗಿದೆ. ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದು, ಅದರಲ್ಲಿ 10 ಮನೆಗಳು ಹಾನಿಗೊಳಗಾಗಿವೆ, ಕೆಲ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಇನ್ನಷ್ಟು ಮನೆಗಳು ಇಂದೋ ನಾಳೆಯೋ ಎನ್ನುವ ಸ್ಥಿತಿಗೆ ತಲುಪಿವೆ.
ಬಹುತೇಕರು ಮೀನುಗಾರಿಕೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದರು. ಆದರೆ, ಬೋಟ್, ಬಲೆಗಳೂ ನೀರು ಪಾಲಾಗಿವೆ. ಈ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮೊದಲು ಮೀನುಗಾರರಿಗೆ ಮನೆ ಹಾಗೂ ಬದುಕಿಗೆ ಆಸರೆಯಾಗಿದ್ದ ದೋಣಿ ಬಲೆಗಳನ್ನು ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.