ಮಂಗಳೂರು : ನಗರದ ಬಜಾಲ್ ಶಾಫಿ ಕ್ಲಿನಿಕ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕ ಮೇ 21ರಂದು ನಾಪತ್ತೆಯಾಗಿದ್ದು, ಇಂದು ಮುಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾರೆ.
ಫರ್ನೀಚರ್ ಪಾಲಿಶ್ ಕೆಲಸ ಮಾಡುತ್ತಿದ್ದ ರಾಮೇಶ್ವರ ಸಹಾನಿ (45) ಎಂಬಾತ ಲಾಕ್‌ಡೌನ್ ಸಡಿಲವಾದ ಬಳಿಕ ಊರಿಗೆ ಹೋಗಬೇಕೆಂದು ಮನೆಯಲ್ಲಿ ತಿಳಿಸಿದ್ದರು. ಆದರೆ, ಸಂಬಂಧಿಕರು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಮೇ 21ರಂದು ಅವರು ದಿಢೀರನೇ ನಾಪತ್ತೆಯಾಗಿದ್ದರು. ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿತ್ತು. ಅಲ್ಲದೆ ಊರಿಗೂ ಹೋಗದೆ ನಗರದ ಬಜಾಲ್‌ನಲ್ಲಿರುವ ಬಾಡಿಗೆ ಮನೆಗೂ ಹಿಂದಿರುಗದ ಕಾರಣ ಅವರ ಪುತ್ರ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಜೂನ್ 3ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆದರೆ, ಮೇ 21ರಂದು ಕಾಲ್ನಡಿಗೆಯಲ್ಲಿಯೇ ತನ್ನ ಊರಿಗೆ ಹೊರಟಿದ್ದ ರಾಮೇಶ್ವರ ಸಹಾನಿ ಅವರಿಗೆ ಮುಲ್ಕಿ ಬಳಿ ಯಾವುದೋ ವಾಹನ ಢಿಕ್ಕಿ ಹೊಡೆದು ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಮುಲ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಗೆ ಅವರ ಹೆಸರು ಸರಿಯಾಗಿ ತಿಳಿಯದ ಕಾರಣ ಅಪಘಾತದ ಬಗ್ಗೆ ವಿಷಯ ಬೆಳಕಿಗೆ ಬಂದಿರಲಿಲ್ಲ.
ರಾಮೇಶ್ವರ ಸಹಾನಿ ಅವರು ನಾಪತ್ತೆಯಾದ ಬಗ್ಗೆ ಜೂನ್ 4ರಂದು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಆಸ್ಪತ್ರೆಯ ವೈದ್ಯರು ಗಮನಿಸಿ ಶುಕ್ರವಾರ ಕಂಕನಾಡಿ ಠಾಣೆಯ ಪೊಲೀಸರಿಗೆ ಕರೆ ಮಾಡಿ ನಾಪತ್ತೆಯಾದ ವ್ಯಕ್ತಿ ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದ್ದರು.