ಮಂಗಳೂರು: ಮುಂಬೈನಿಂದ ಮಾದಕ ದ್ರವ್ಯ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಏಳು ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಜಾಲ್ ಜಪ್ಪು ನಿವಾಸಿ ಹಕೀಂ (25), ತೊಕ್ಕೊಟ್ಟು ನಿವಾಸಿ ಬಾತಿಶ್ (30), ಅತ್ತಾವರ ನಿವಾಸಿ ಕಿಶನ್(25), ಚೊಂಬುಗುಡ್ಡೆ ಪಂಡಿತ್ ಹೌಸ್ ಆಶೀಷ್ (22), ತೊಕ್ಕೊಟ್ಟು ನಿವಾಸಿ ಅಬ್ದುಲ್ ಹಕೀಂ (30) ಸೇರಿದಂತೆ ಏಳು ಮಂದಿ ಬಂಧಿತರು. ಕಾಟಿಪಳ್ಳ ನಿವಾಸಿ ಶಕ್ತಿ ಅಲಿಯಾಸ್ ಶಾಫಿ ಮುಂಬೈಯಿಂದ ನಿಷೇಧಿತ ಮಾದಕ ದ್ರವ್ಯ ಮತ್ತು ಗಾಂಜಾ ತಂದು ಆರೋಪಿಗಳಾದ ಹಕೀಂ, ಬಾತಿಶ್, ಕಿಶನ್‌ಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ಆರೋಪಿಗಳು ಪಣಂಬೂರು ತಣ್ಣೀರುಬಾವಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಸಹಿತ ಗಿರಾಕಿಗಳಾದ ಆಶೀಷ್, ಅಬ್ದುಲ್ ಹಕೀಂ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಶಾಫಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ಬಂಧಿತರಿಂದ ಮಾದಕ ದ್ರವ್ಯ ಮಾರಾಟಕ್ಕೆ ಬಳಸಿದ್ದ ಕಾರು, ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ, ಪಿಎಸ್ಐ ಕಬ್ಬಾಳ್‌ರಾಜ್, ಮೋಹನ್, ರಾಜಾ, ಆಶಿತ್, ಮಣಿ, ಚಂದ್ರ ಅಡೂರು, ಚಂದ್ರಶೇಖರ್ ಭಾಗವಹಿಸಿದ್ದರು.