ಮಂಗಳೂರು : ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 50 ಕೆ.ಜಿ ಗೋಮಾಂಸ ಹಾಗೂ ಅಕ್ರಮ ಕಸಾಯಿ ಖಾನೆಯಲ್ಲಿ ಕಟ್ಟಿಹಾಕಿರುವ 8 ಗೋವುಗಳನ್ನು ವಶಪಡಿಸಿಕೊಂಡ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಹಸ್ತಾಂತರಿಸಿರುವ ಘಟನೆ ನಗರದ ಕಿನ್ನಿಗೋಳಿ ಸಮೀಪದ ಏಳಿಂಜೆ ಸಂಕಲಕರಿಯದ ಬಳಿ ಶುಕ್ರವಾರ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೆಯಂಗಡಿ, ಪುನರೂರು ಹಾಗೂ ಸಂಕಲಕರಿಯ ನಿವಾಸಿಗಳಾದ ಮಹಮ್ಮದ್, ಹಸನಬ್ಬ, ರಫೀಕ್, ಇದಿನಬ್ಬ ಹಾಗೂ ಇಬ್ರಾಹಿಂ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಸಂಕಲಕರಿಯದಿಂದ ಕಿನ್ನಿಗೋಳಿ ಕಡೆಗೆ ಓಮ್ನಿಯಲ್ಲಿ ಶುಕ್ರವಾರ ಸಂಶಯಾಸ್ಪದ ರೀತಿಯಲ್ಲಿ ಸುಮಾರು ಒಂದು ಕ್ವಿಂಟಾಲ್ನಷ್ಟು ಗೋಮಾಂಸ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಹಿಂದೂ ಕಾರ್ಯಕರ್ತರು ಓಮ್ನಿ ವಾಹನವನ್ನು ನಿಲ್ಲಿಸಿ ಆರೋಪಿಗಳನ್ನು ಪ್ರಶ್ನಿಸಿದಾಗ ಆರೋಪಿಗಳು ಕಸಾಯಿಖಾನೆಯಿರುವ ಸ್ಥಳವನ್ನು ತಿಳಿಸಿದ್ದಾರೆ.
ತಕ್ಷಣ ಸಂಘಟನೆಯ ಕಾರ್ಯಕರ್ತರು ಸಂಕಲಕರಿಯ ಕಸಾಯಿಖಾನೆಗೆ ಸ್ಥಳಕ್ಕೆ ದಾಳಿ ನಡೆಸಿ 8 ಗೋವುಗಳನ್ನು ರಕ್ಷಿಸಿದ್ದು, ಮಾಂಸ ಹಾಗೂ ಗೋವುಗಳನ್ನು ಮುಲ್ಕಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾಲುವೆ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಆರೋಪ: ಸಚಿವ ಆನಂದ ಸಿಂಗ್ ವಿರುದ್ಧ ದೂರು