ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ 34 ಕಾಮಗಾರಿಗಳಲ್ಲಿನ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬುದರ ಕುರಿತು ವಿವರಣೆ ನೀಡುವಂತೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಈ ಕುರಿತು ಹೆಚ್ಚಿನ ಸ್ಪಷ್ಟನೆ ನೀಡಲು ಆಯುಕ್ತರು ಡಿ. 23ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಖುದ್ದಾಗಿ ಹಾಜರಿರಬೇಕು ಎಂದು ಸೂಚಿಸಿದೆ.
ಈ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ನೀವು ಸ್ಮಾರ್ಟ್ ಆಗದೆ, ಹೇಗೆ ಸ್ಮಾರ್ಟ್ ಸಿಟಿ ನಿರ್ಮಿಸುತ್ತೀರಿ ಎಂದು ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಕಟ್ಟಡ ನಿರ್ಮಾಣ ಮತ್ತು ತೆರವು ತ್ಯಾಜ್ಯ ನಿರ್ವಹಣೆ ನಿಯಮಗಳು -2016ರ ನಿಯಮಗಳನ್ನೇಕೆ ಅನುಸರಿಸುತ್ತಿಲ್ಲ. ಸ್ಮಾರ್ಟ್ ಸಿಟಿ ಕಾರ್ಪೋರೇಷನ್ ಏಕೆ ಈ ಬಗ್ಗೆ ಮೌನವಾಗಿದೆ, ಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ಪರಿಸ್ಥಿತಿ ಹೀಗೆ ಮುಂದುವರೆದರೆ ನಿಯಮ ಪಾಲನೆ ಮಾಡದೆ ಇರುವ ಬಗ್ಗೆ ಪರಿಶೀಲನೆ ನಡೆಸಲು ಐಐಎಸ್ಸಿ ಅಥವಾ ನೀರಿಯಂತಹ ತಜ್ಞ ಸಮಿತಿಗಳನ್ನು ರಚನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಕಾನೂನು ಸೇವಾ ಪ್ರಾಧಿಕಾರದ ಪರ ವಾದಿಸಿದ ವಕೀಲ ಶ್ರೀಧರ್ ಪ್ರಭು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರು ನಗರದಲ್ಲಿ ಕೈಗೊಂಡಿರುವ 34 ಕಾಮಗಾರಿಗಳಲ್ಲಿ ಕಿಂಚಿತ್ತೂ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕಾಮಗಾರಿಗಳ ಪಕ್ಕದಲ್ಲೇ ನಿರ್ಮಾಣ ತ್ಯಾಜ್ಯ ಸಂಗ್ರಹವಿದೆ. ಅದನ್ನು ತೆರವುಗೊಳಿಸಿಲ್ಲದಿರುವುದರಿಂದ ನಗರದಲ್ಲಿ ಜನರು ಸಂಚರಿಸಲು ತೊಂದರೆ ಎದುರಾಗುತ್ತಿದೆ ಎಂದರು.
ಸ್ಮಾರ್ಟ್ ಸಿಟಿ ಕಾರ್ಪೋರೇಷನ್ ಪರ ವಕೀಲರು, ನಿಗಮ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳಲ್ಲೂ ಸಹ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರೂ ನ್ಯಾಯಾಲಯ ವಾದ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಆಗಿರುವ ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿರುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಸ್ಮಾರ್ಟ್ ಸಿಟಿ ಕಾರ್ಪೋರೇಷನ್‌ಗೆ ನೋಟಿಸ್
ಈ ಮಧ್ಯೆ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಾದ ಮಂಡಿಸಿದ ವಕೀಲರು, ತ್ಯಾಜ್ಯ ವಿಲೇವಾರಿ ನಿಯಮ ಪಾಲನೆ ಮಾಡದೇ ಇರುವುದಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಕಾರ್ಪೋರೇಷನ್‌ಗೆ ನೋಟಿಸ್ ನೀಡಲಾಗಿದೆ. ಕಾರ್ಪೋರೇಷನ್ ಉತ್ತರವೂ ನೀಡಿದೆ, ಅದರ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಲಾಗುವುದು ಎಂದು ಹೇಳಿದರು.