ಮಂಗಳೂರು : ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಜಿಪಿಎಲ್ ಉತ್ಸವದ ಪ್ರಯುಕ್ತ ಹಲವು ಕಾರ್ಯಕ್ರಮಗಳ ಜೊತೆಗೆ ಈ ಸಲ ಹೆಲಿಟೂರಿಸಂ ಆಯೋಜಿಸಲಾಗಿದೆ. ಇಂದಿನಿಂದ ( ಫೆ.25 ) ಭಾನುವಾರದ (ಫೆ.27)ವರೆಗೆ ನಡೆಯುವ ಪುಜ್ಲಾನ ಜಿಪಿಎಲ್ 2022ನಲ್ಲಿ ಈ ವರ್ಷದ ವಿಶೇಷ ಆಕರ್ಷಣೆಯಾಗಿ ಹೆಲಿಟೂರಿಸಂ ಆಯೋಜಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ನಿಯಂತ್ರಣದಲ್ಲಿ ಈ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಮೂರು ದಿನದ ಉತ್ಸವದಲ್ಲಿ ಶುಕ್ರವಾರದಂದು ತಲಾ ರೂ. 3,500 ಮತ್ತು ಶನಿವಾರ, ಭಾನುವಾರದಂದು ತಲಾ 4 ಸಾವಿರ ರೂ. ಟಿಕೆಟ್ ದರ ನಿಗದಿಸಲಾಗಿದೆ.
ಇದು ಹತ್ತು ನಿಮಿಷಗಳ ಕಾಲ ಮಂಗಳೂರು ನಗರದಲ್ಲಿ ಹಾರಾಟ ನಡೆಸಲಿದೆ. ಉಳ್ಳಾಲ ಸೇತುವೆ, ಧಕ್ಕೆ, ಬೆಂಗರೆ, ಮಂಗಳೂರು ನಗರದಾದ್ಯಂತ ಹಾರಾಟ ನಡೆಸಲಿದೆ.
ಈಗಾಗಲೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು 120 ಮಂದಿ ಬುಕ್ಕಿಂಗ್ ಮಾಡಿದ್ದಾರೆ. ಅವರಿಗೆ ಸಮಯ ಹೊಂದಾಣಿಕೆ ಮಾಡಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಹೆಲಿಕಾಪ್ಟರ್ ನಗರದಲ್ಲಿ ಸಂಚಾರ ನಡೆಸಲಿದೆ ಎಂದು ಆಯೋಜಕರು ಹೇಳಿದ್ದಾರೆ.