ಪುತ್ತೂರು(ದಕ್ಷಿಣ ಕನ್ನಡ) : ಇಲ್ಲಿನ ನಗರದ ಹೊರವಲಯದ ಕಬಕ ಗ್ರಾಮದ ಮಂಜಲ್ಪಡ್ಪು ಜನತಾ ಕಾಲೋನಿಯ ನಿವಾಸಿ ವಸಂತ ಹೆಗ್ಡೆ ಅವರ ಮನೆ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಈ ಬಡ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸಂತ ಅವರ ತಾಯಿ ಅನಾರೋಗ್ಯ ಮತ್ತು ಮಾನಸಿಕ ಪೀಡಿತರಾಗಿದ್ದಾರೆ. ವಸಂತ ಅವರು ಕೂಲಿ ಕೆಲಸ ಮಾಡಿಕೊಂಡು ಸಂಸಾರವನ್ನು ನಿರ್ವಹಿಸುತ್ತಿದ್ದಾರೆ.
ನಿರಂತರ ಮಳೆಯ ಪರಿಣಾಮ ಮನೆಯ ಹಿಂಬದಿಯ ಗೋಡೆ ಮತ್ತು ತಾರಸಿ ಭಾಗ ಕುಸಿದಿದೆ. ಪ್ರಸ್ತುತ ಎದುರಾಗಿರುವ ವಿಪತ್ತಿನಿಂದಾಗಿ ವಸಂತ ಅವರು ಕಂಗಾಲಾಗಿದ್ದಾರೆ. ಪುತ್ತೂರು ನಗರಸಭೆಯವರು ಕುಸಿದು ಬಿದ್ದಿರುವ ಮನೆಯ ಮೇಲ್ಚಾವಣಿಗೆ ಹೊದಿಸಲು ಪ್ಲಾಸ್ಟಿಕ್ ಟರ್ಪಾಲ್ ನೀಡಿದ್ದು, ಅದನ್ನು ಮನೆಗೆ ಹೊದಿಸಿ ಈ ಕುಟುಂಬಸ್ಥರು ಅಪಾಯದ ಸ್ಥಿತಿಯಲ್ಲಿರುವ ಈ ಮನೆಯಲ್ಲೇ ವಾಸಿಸುತ್ತಿದ್ದಾರೆ.
ಮನೆ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರ ಔಷಧಿಗೂ ಖರ್ಚು ಮಾಡಬೇಕಾಗಿದೆ. ತಾನು ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಸ್ಥಿತಿಯಲ್ಲಿ ಬದುಕುತ್ತಿದ್ದು, ಕುಸಿದಿರುವ ಮನೆಯವನ್ನು ಸರಿಪಡಿಸಿಕೊಟ್ಟರೆ ಸಾಕು ಎಂದು ವಸಂತ ಹೆಗ್ಡೆ ಅವರು ನಗರಸಭೆಗೆ ಮನವಿ ಮಾಡಿದ್ದಾರೆ. ಮನೆಗೆ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಆಗುವಂತೆ ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕರು ಶನಿವಾರ ವಸಂತ ಅವರಿಗೆ ಸೂಚನೆ ನೀಡಿದ್ದಾರೆ.
ಅಪಾಯದಂಚಿನಲ್ಲಿ ಮೂರು ಮನೆಗಳು : ಪುತ್ತೂರು ನಗರಸಭಾ ವ್ಯಾಪ್ತಿಯ ಹೆಬ್ಬಾರಬೈಲ್ನ ಎಪಿಎಂಸಿಗೆ ತೆರಳುವ ರಸ್ತೆಯ ಬಳಿ ಗುಡ್ಡ ಕುಸಿತ ಉಂಟಾಗಿದೆ. ಈ ಗುಡ್ಡ ಕುಸಿತದಿಂದ ಮಹಮ್ಮದ್ ಶರೀಫ್, ಜಾರ್ಜ್ ಮತ್ತು ಯೋಗೀಶ್ ಅವರ ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮಹಮ್ಮದ್ ಶರೀಫ್ ಅವರ ಮನೆಯ ನೀರಿನ ಟ್ಯಾಂಕ್ ಮತ್ತು ಮನೆಯ ಪಿಲ್ಲರ್ ಕೂಡ ಕುಸಿದು ಬಿದ್ದಿದೆ. ಮಳೆ ಮುಂದುವರೆದರೆ ಎರಡು ದಿನಗಳಲ್ಲಿ ಮನೆಯೂ ಕೂಡ ಜರಿದು ಬೀಳುವ ಸಂಭವವಿದೆ.
ನಿರ್ಮಾಣ ಹಂತದ ಮನೆ ಸಂಪೂರ್ಣ ನಾಶ: ಗುಡ್ಡ ಜರಿದು ನಿರ್ಮಾಣ ಹಂತದ ಮನೆಯೊಂದು ಸಂಪೂರ್ಣ ನಾಶವಾದ ಘಟನೆ ಪುತ್ತೂರಿನ ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುಂಬಾಡಿ ಎಂಬಲ್ಲಿ ಸಂಭವಿಸಿದೆ. ಕುಂಬಾಡಿಯ ರಾಮ್ ಭಟ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ನಿರ್ಮಾಣ ಹಂತದ ಈ ಮನೆ ಮೇಲೆ ಜುಲೈ 1 ರಂದು ಮನೆ ಹಿಂಬದಿಯ ಗುಡ್ಡದ ಮಣ್ಣು ಜಾರಿ ಭಾಗಶಃ ಹಾನಿಯಾಗಿತ್ತು.
ಇಂದು ಮತ್ತೆ ಭಾರಿ ಶಬ್ದದೊಂದಿಗೆ ಗುಡ್ಡದಿಂದ ಬಂಡೆ ಸಹಿತ ಮಣ್ಣು ಮನೆಯ ಮೇಲೆ ಬಿದ್ದಿದೆ. ಮನೆಯ ಅವಶೇಷಗಳನ್ನು ಸುಮಾರು 20 ಮೀಟರ್ ದೂರಕ್ಕೆ ರಸ್ತೆ ಬದಿಗೆ ತಳ್ಳಿದೆ.
ಸ್ಥಳಕ್ಕೆ ಬನ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ಜಯ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಘಟನೆಯ ಕುರಿತು ತಹಶೀಲ್ದಾರ್ ಗಮನಕ್ಕೆ ತರಲಾಗಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮ ಮುಳುಗಡೆ: ಕೆಆರ್‌ಎಸ್ ಡ್ಯಾಂನಿಂದ 41,000 ಕ್ಯೂಸೆಕ್ ಬಿಡುಗಡೆ