ಜಿಪಂ, ತಾಪಂ ಚುನಾವಣೆ ಶೀಘ್ರ ನಡೆಯಲಿ: ಮಾಜಿ ಸಂಸದ ಸಿ.ನಾರಾಯಣಸ್ವಾಮಿ - ಮುಂದಿನ ಚುನಾವಣೆಗೆ ಕಾಂಗ್ರೆಸ್ ತಯಾರಿ
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕಾಂಗ್ರೆಸ್ನ ತತ್ವ ಸಿದ್ಧಾಂತಗಳನ್ನು ಅಳವಡಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಘಟಕಗಳನ್ನು ಆರಂಭಿಸಲಾಗುತ್ತದೆ ಎಂದು ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ ಹೇಳಿದ್ದಾರೆ.
ಮಂಗಳೂರು: ಕೋವಿಡ್ ಸೋಂಕು ಭೀತಿಯಿಂದ ತಾಪಂ, ಜಿಪಂ ಚುನಾವಣೆ ನಡೆಸಲಾಗದೆ ಆಡಳಿತಾಧಿಕಾರಿಗಳನ್ನು ಇರಿಸಲಾಗಿದೆ. ಚುನಾವಣೆ ನಡೆಸುವ ವಿಚಾರ ನ್ಯಾಯಾಲಯದಲ್ಲಿದ್ದು, ಅದರ ತೀರ್ಮಾನಕ್ಕೆ ಒಳಪಟ್ಟು ಚುನಾವಣಾ ಪ್ರಕ್ರಿಯೆ ಚುರುಕುಗೊಳ್ಳಬೇಕಾಗಿದೆ ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರಕಾರದ ಸಂದರ್ಭದಲ್ಲಿ ಸೂಕ್ತ ತಿದ್ದುಪಡಿ ತಂದು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರವಧಿಯನ್ನು ಸಂಪೂರ್ಣ 5 ವರ್ಷಕ್ಕೆ ವಿಸ್ತರಿಸಲಾಗಿತ್ತು. ಆದರೆ ಇದೀಗ ಆಡಳಿತ ನಡೆಸುತ್ತಿರುವ ಸರಕಾರ ಅದನ್ನು 30 ತಿಂಗಳಿಗೆ ಇಳಿಸಿದೆ. ಆದ್ದರಿಂದ ಪಂಚಾಯ್ತಿ ವ್ಯವಸ್ಥೆಯಲ್ಲಿ ಅಧಿಕಾರಿಗಳ ನೇಮಕಾತಿ ಕೂಡಲೇ ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕಾಂಗ್ರೆಸ್ನ ತತ್ವ ಸಿದ್ಧಾಂತಗಳನ್ನು ಅಳವಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಹಂತಗಳಲ್ಲೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಘಟಕಗಳನ್ನು ಆರಂಭಿಸಲಾಗುತ್ತದೆ. ಈ ಸಂಘಟನೆಯನ್ನು ಬಲಗೊಳಿಸಲು ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸುವುದಲ್ಲದೆ ಸಂಘಟನೆಯ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಸಿ.ನಾರಾಯಣ ಸ್ವಾಮಿ ಹೇಳಿದರು.
ಇದನ್ನೂ ಓದಿ: ಎರಡು ಮದುವೆಯಾಗಿದ್ದವಳ ಜೊತೆ ಲವ್ವಿ ಡವ್ವಿ: ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ