ಮಂಗಳೂರು : ಮಂಗಳೂರು ಉಪವಿಭಾಗದ ಆಯುಕ್ತರ ಕಚೇರಿಯಲ್ಲಿ ನಿನ್ನೆ ಅಧಿಕಾರಕ್ಕಾಗಿ ಇಬ್ಬರು ಉಪವಿಭಾಗಾಧಿಕಾರಿಗಳ ನಡುವೆ ನಡೆದ ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಿದ ದ. ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಈಗ ಪರಿಸ್ಥಿತಿ ತಿಳಿಯಾಗಿದೆ. ಯಾವುದೇ ರೀತಿಯ ಗೊಂದಲವಿಲ್ಲ. ನಾವು ಸರಕಾರದ ಆದೇಶವನ್ನು ಕಾಯುತ್ತಿದ್ದು, ಆ ರೀತಿಯಲ್ಲಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.
ಮಂಗಳೂರು ಸಹಾಯಕ ಕಮಿಷನರ್ ವರ್ಗಾವಣೆ ವಿಚಾರವನ್ನು ಪ್ರಶ್ನಿಸಿ ಕೆಇಟಿ ಮೊರೆಹೋಗಿ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಅವರು ಮರಳಿ ಅಧಿಕಾರ ಸ್ವೀಕರಿಸಬೇಕಾದರೆ ಕೆಇಟಿ ಆದೇಶ ನೀಡಬೇಕು ಎಂದು ಸಿಂಧೂ ಬಿ. ರೂಪೇಶ್ ಹೇಳಿದರು.
ಘಟನೆ ಹಿನ್ನೆಲೆ
ಮಂಗಳೂರು ಸ್ಮಾರ್ಟ್ ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಗೊಂಡಿದ್ದ ರವಿಚಂದ್ರ ನಾಯಕ್ ಬುಧವಾರ ಮಂಗಳೂರು ಉಪವಿಭಾಗದ ಆಯುಕ್ತರ ಕಚೇರಿಗೆ ಏಕಾಏಕಿ ಆಗಮಿಸಿ ಹಾಲಿ ಉಪವಿಭಾಗಾಧಿಕಾರಿ ಮದನ್ ಮೋಹನ್ ಸಿ.ಅವರಿಂದ ಬಲವಂತವಾಗಿ ಅಧಿಕಾರ ವಹಿಸಿಕೊಳ್ಳಲು ಪ್ರಯತ್ನಿಸಿ ಅವರೊಂದಿಗೆ ವಾಗ್ವಾದ ನಡೆಸಿದ್ದರು.
ರವಿಚಂದ್ರ ನಾಯಕ್ ಅವರನ್ನು ಮಂಗಳೂರು ಸ್ಮಾರ್ಟ್ ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆಗೊಳಿಸಿ ಒಂದು ತಿಂಗಳ ಹಿಂದೆ ಸರಕಾರ ಆದೇಶ ಹೊರಡಿಸಿತ್ತು. ಅದೇ ರೀತಿ ಮಂಗಳೂರು ಉಪವಿಭಾಗಾಧಿಕಾರಿ ಹುದ್ದೆಗೆ ಮದನ್ ಮೋಹನ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ನೀಡಿತ್ತು. ಆದರೆ ರವಿಚಂದ್ರ ನಾಯಕ್ ಅವರು ಸ್ಮಾರ್ಟ್ ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರಲಿಲ್ಲ. ಮದನ್ ಮೋಹನ್ ಉಪವಿಭಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿತ್ತು.