ಮಂಗಳೂರು: ದ.ಕ.ಜಿಲ್ಲೆಗಳಂತಹ ಕೋಮು ಸೂಕ್ಷ್ಮ ಪ್ರದೇಶಗಳಿಗೆ ಪ್ರಾಮಾಣಿಕತೆ, ದಕ್ಷತೆ ಹಾಗೂ ಸಾರ್ವಜನಿಕರ ಬಗ್ಗೆ ಗೌರವವಿರುವ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಮನವರಿಕೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಬಳಿಕ ದ.ಕ.ಜಿಲ್ಲೆಗೆ ಮೊದಲ ಬಾರಿಗೆ ಪ್ರವಾಸ ಕೈಗೊಂಡ ಅವರು ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಅದಕ್ಷ ಪೊಲೀಸರಿಂದಾಗಿ ಕಿಡಿಗೇಡಿಗಳ ದಾಂಧಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ತಮ್ಮ ನಡೆ ಹಾಗೂ ವರ್ತನೆಗಳಿಂದಲೂ ಪೊಲೀಸ್ ಅಧಿಕಾರಿಗಳು ಗೌರವವನ್ನು ಗಳಿಸಬೇಕಾಗಿದೆ. ಇದರಿಂದ ಶೇ.50ರಷ್ಟು ಶಾಂತಿ ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ 2019ರ ಬಳಿಕ ಕಾನೂನು ಸುವ್ಯವಸ್ಥೆ, ಸೌಹಾರ್ದತೆ ಉತ್ತಮವಾಗಿದೆ. ಮಾದಕದ್ರವ್ಯ ಜಾಲ, ಭೂಗತ ಜಾಲವೂ ಸಾಕಷ್ಟು ಹತೋಟಿಯಲ್ಲಿದೆ. ಕೋಮುಸೌಹಾರ್ದತೆ ಉತ್ತಮವಾಗಿ ಕಾಪಾಡುವ ಅಧಿಕಾರಿಗಳಿಗೆ ಗೌರವ ಪದಕ ನೀಡುವಂತಹ ಕಾರ್ಯವೂ ಆಗಬೇಕೆಂದು ಸರಕಾರಕ್ಕೆ ಮನವಿ ಮಾಡುತ್ತೇನೆ. ಕೋಮು ಸೂಕ್ಷ್ಮವಿಚಾರಗಳ ಬಗ್ಗೆ ಜನರು ಆದಷ್ಟು ಸೂಕ್ಷ್ಮವಾಗಿ ವರ್ತಿಸಿ ಸಮಾಜದ ಸ್ವಾಸ್ಥ್ಯ ಕೆಡುವಂತೆ ಮಾಡದೆ ಸೌಹಾರ್ದತೆ ಕಾಪಾಡಿದಲ್ಲಿ ದ.ಕ.ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಜಿಲ್ಲೆಯಾಗಲಿದೆ. ಆದ್ದರಿಂದ ಜನರೂ ವದಂತಿಗಳು ಕಿವಿಗೊಡದೆ ಜನತೆ ತಾಳ್ಮೆಯಿಂದ ವರ್ತಿಸಬೇಕು ಅಬ್ದುಲ್ ಅಜೀಮ್ ಹೇಳಿದರು ಸಲಹೆ ನೀಡಿದರು.
ಇದನ್ನೂ ಓದಿ: ಫೇಸ್ಬುಕ್ ಮೂಲಕ ಹನಿಟ್ರ್ಯಾಪ್ ದಂಧೆ: ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಬಂಧನ
ಈ ಬಾರಿ ನೆರೆ ಹಾಗೂ ಕೊರೊನಾ ಕಾರಣದಿಂದ ಅಲ್ಪಸಂಖ್ಯಾತರ ಇಲಾಖೆಗೆ ಸಾಕಷ್ಟು ಅನುದಾನಗಳು ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಎಲ್ಲಾ ಯೋಜನೆಗಳನ್ನು ಮತ್ತೆ ಜೀವಂತಗೊಳಿಸಬೇಕು ಎಂದು ಸರಕಾರಕ್ಕೆ ಸೂಚಿಸಲಾಗುತ್ತದೆ. ಮುಂದಿನ ವಿಧಾನ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತ ಇಲಾಖೆಯ ಸ್ಕಾಲರ್ ಶಿಪ್ ನಿಲ್ಲಿಸಲಾಗಿರುವ ಬಗ್ಗೆ, ವಕ್ಫ್ ಆಸ್ತಿಯನ್ನು ಉಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಅಬ್ದುಲ್ ಅಜೀಮ್ ಹೇಳಿದರು.