ಮಂಗಳೂರು: ಹಳೆಯಂಗಡಿ ಗ್ರಾಮ ಪಂಚಾಯತ್ ಅನ್ನು ಸದಸ್ಯರಿಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡದೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಜಾ ಮಾಡಿರುವುದು ರಾಜಕೀಯ ಸೇಡಿನ ಹುನ್ನಾರ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳ ಹಕ್ಕುಗಳನ್ನು ಮೊಟಕುಗೊಳಿಸಿ, ಆಡಳಿತ ಮಂಡಳಿಯನ್ನೇ ವಜಾ ಮಾಡಿರುವುದು ಮತದಾರರಿಗೆ ಮಾಡಿದ ಅವಮಾನ. ಇದನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಒಂದು ವೇಳೆ ಆಡಳಿತ ಮಂಡಳಿಯನ್ನು ವಜಾಗೊಳಿಸುವುದಾದರೆ ಯಾವ ಕಾರಣಕ್ಕಾಗಿ ಮಾಡಲಾಗುತ್ತದೆ ಎಂದು ಎರಡೂ ಕಡೆಯವರನ್ನು ಕರೆದು ಚರ್ಚಿಸಿ, ನಂತರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ, ಇದು ಜಿ.ಪಂ. ಹಾಗೂ ತಾಪಂ ಅಧಿಕಾರಿಗಳ ವೈಫಲ್ಯ ಎಂದು ದೂರಿದರು.
ಗ್ರಾಪಂನಲ್ಲಿ ನಡೆಯಬೇಕಾದ ಸಾಮಾನ್ಯ ಸಭೆಗಳು ನಡೆಯದ ಕಾರಣ ಈ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವುದಕ್ಕೆ ಕಾರಣ ಕೊಡಲಾಗಿದೆ. ಆದರೆ ನಡೆಸಬೇಕಾದ 12 ಸಾಮಾನ್ಯ ಸಭೆಗಳಲ್ಲಿ ಈಗಾಗಲೇ ಮೂರು ಸಾಮಾನ್ಯ ಸಭೆ, ಎರಡು ವಿಶೇಷ ಸಭೆ ಹಾಗೂ ಎರಡು ಗ್ರಾಮ ಸಭೆಗಳು ನಡೆದಿವೆ. ಉಳಿದ ಸಭೆಗಳು ನಡೆದಿಲ್ಲ. ಮೂರು ತಿಂಗಳು ಚುನಾವಣೆ ಪ್ರಯುಕ್ತ ಸಭೆ ನಡೆಸಲು ಸಾಧ್ಯವಾಗಿಲ್ಲ. ಈ ಸಭೆಗಳನ್ನು ಸರ್ಕಾರದ ಆದೇಶದಂತೆ ಮಾಡಬೇಕಿದ್ದ ಪಿಡಿಒ, ಜೂನ್, ಜುಲೈನಲ್ಲಿ ಗ್ರಾ.ಪಂ.ಗೆ ಕೇವಲ ಎರಡೇ ಬಾರಿ ಹಾಜರಾಗಿದ್ದಾರೆ. ಗ್ರಾ.ಪಂ. ಸಭೆ ಕರೆಯಲು ಅಧ್ಯಕ್ಷರು ವಿಫಲವಾದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯೂ ಸಭೆ ಕರೆಯಬಹುದು. ಆದ್ರೆ ಇದ್ಯಾವುದೂ ಇಲ್ಲಿ ನಡೆದಿಲ್ಲ.
ಆದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಅಮಾನತು ಯಾಕೆ ಮಾಡಿಲ್ಲ? ಅಧಿಕಾರಿಗಳು ತಮ್ಮ ಕರ್ತವ್ಯಲೋಪವನ್ನು ಮುಚ್ಚಿಹಾಕಲು, ಚುನಾಯಿತ ಜನಪ್ರತಿನಿಧಿಯಾದ ದಲಿತ ಮಹಿಳೆ ಅಧ್ಯಕ್ಷರಾಗಿದ್ದಾರೆ ಎಂಬ ಕಾರಣಕ್ಕೆ ಹಾಗೂ 27 ಸದಸ್ಯರಲ್ಲಿ 15 ಸದಸ್ಯರು ಕಾಂಗ್ರೆಸ್ ಪಕ್ಷದವರು ಎಂಬ ಕಾರಣಕ್ಕೆ ಏಕಾಏಕಿ ಆಡಳಿತ ಮಂಡಳಿಯನ್ನೇ ವಜಾಗೊಳಿಸಿ ಜಿ.ಪಂ. ಅಧ್ಯಕ್ಷೆ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಐವನ್ ಡಿಸೋಜ ದೂರಿದ್ದಾರೆ.
ಹಳೆಯಂಗಡಿ ಗ್ರಾ.ಪಂ.ನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದನ್ನು ನಾವು ಇಡೀ ರಾಜ್ಯಕ್ಕೆ ತಿಳಿಸುತ್ತೇವೆ. ನ್ಯಾಯಾಲಯಕ್ಕೂ ಹೋಗುತ್ತೇವೆ. ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ನಿಲುವಳಿ ಸೂಚನೆಯನ್ನು ಈ ವಿಚಾರದಲ್ಲಿ ಮಂಡನೆ ಮಾಡುತ್ತೇನೆ. ಅಲ್ಲದೆ ಇಂತಹ ಕ್ರಮ ಕೈಗೊಂಡ ಜಿ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ರಾಜ್ಯ ಸರ್ಕಾರ ವಜಾಗೊಳಿಸಲಿ ಎಂದು ಐವನ್ ಡಿಸೋಜ ಆಗ್ರಹಿಸಿದರು.