ಮಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ನವೀನ್ ಮೃತದೇಹ ತರುವ ಖರ್ಚಿನಲ್ಲಿ 8ಮಂದಿ ಪ್ಯಾಸೆಂಜರ್ ಗಳನ್ನು ತರಬಹುದು ಎಂದು ಆಡಳಿತ ಪಕ್ಷದ ಶಾಸಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಗನನ್ನು ಕಳೆದುಕೊಂಡ ನೋವು ಆ ಕುಟುಂಬದವರಿಗೆ ಅರ್ಥವಾಗುತ್ತದೆಯೇ ವಿನಃ ಕರುಣೆ ಇಲ್ಲದವರಿಗೆ ಅರ್ಥವಾಗುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮೃತದೇಹವನ್ನು ತರಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಸತ್ಯ ಹೇಳಲಿ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಜತಾಂತ್ರಿಕತೆ ಹಾಗೂ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೋ ವಿದ್ಯಾರ್ಥಿಗಳಿಗೆ ವಿದೇಶಾಂಗ ಸಚಿವರು ಯಾರೆಂದು ಇನ್ನೂ ತಿಳಿದಿಲ್ಲ ಎಂದು ಟೀಕಿಸಿದರು.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುತ್ತದೆ ಎಂದು 15 ದಿನಗಳ ಮೊದಲೇ ಗೊತ್ತಿತ್ತು. ಆದರೂ ನಮ್ಮ ಕೇಂದ್ರ ಸರ್ಕಾರ ದೇಶದ ವಿದ್ಯಾರ್ಥಿಗಳ ರಕ್ಷಣೆ ಮಾಡಲು ಯಾಕೆ ಕ್ರಮ ಕೈಗೊಂಡಿಲ್ಲ. ಬಾರ್ಡರ್ವರೆಗೆ ಬಂದ ವಿದ್ಯಾರ್ಥಿಗಳನ್ನು ಮಾತ್ರ ಏರ್ ಲಿಫ್ಟ್ ಮಾಡಲಾಗುತ್ತಿದೆಯೇ ಹೊರತು, ಉಕ್ರೇನ್ ದೇಶದ ಒಳಗೆ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ರಕ್ಷಣೆ ಆಗುತ್ತಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸುವವರ ಮೇಲೆ ಕಠಿಣ ಕ್ರಮವಾಗಲಿ: ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸುತ್ತಿರುವ 'ಮಂಗಳೂರು ಮುಸ್ಲಿಂ' ಹಾಗೂ 'ಕೆಎಂಡಿ' ಮುಂತಾದ ಪೇಜ್ಗಳ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿ. ಗಲಭೆ, ಹಲ್ಲೆ ಮುಂತಾದ ಕೃತ್ಯಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕಬೇಕು. ಗೂಂಡಾ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ ಅದಕ್ಕೆ ಪೊಲೀಸ್ ಇಲಾಖೆಯೇ ಜವಾಬ್ದಾರಿ ಆಗುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.
ರಾಜ್ಯದಲ್ಲಿ ಮಂಡನೆಯಾಗಿರೋದು ರಿವರ್ಸ್ ಗೇರ್ ಬಜೆಟ್: ರಾಜ್ಯ ಬಜೆಟ್ ಎಲ್ಲರಿಗೆ ನಿರಾಸೆ ತಂದಿದೆ. ಇದೊಂದು ರಿವರ್ಸ್ ಗೇರ್ ಬಜೆಟ್ ಆಗಿದ್ದು, ಸಾರಾಯಿ ಮತ್ತು ಸಾಲದಮೇಲೆ ಅವಲಂಬಿತವಾಗಿರುವ ಬಜೆಟ್ ಆಗಿದೆ. ಸಾಲ ಬಿಟ್ಟು ಇವರಿಂದ ಬೇರೇನು ಆಗುತ್ತಿಲ್ಲ. 2018ರವರೆಗೆ ಅಂದರೆ 70 ವರ್ಷಗಳಲ್ಲಿ ಸಾಲದ ಹೊರೆ ಬಹಳ ಕಡಿಮೆಯಿತ್ತು. ಇದೀಗ ಕೇವಲ ನಾಲ್ಕೇ ವರ್ಷಗಳಲ್ಲಿ ಸಾಲ ದ್ವಿಗುಣಗೊಂಡಿದೆ. ಈ ಬಜೆಟ್ ನಲ್ಲಿ ಕರಾವಳಿಗೆ ಒಂದೇ ಒಂದು ಹೊಸ ಯೋಜನೆ ಸಿಕ್ಕಿಲ್ಲ. ಇದು ಕರಾವಳಿಗರಿಗೆ ಮೋಸದ ಹಾಗೂ ದೋಖಾ ಬಜೆಟ್ ಆಗಿದೆ ಎಂದು ಖಾದರ್ ಬಜೆಟ್ ಬಗ್ಗೆ ಅಪಸ್ವರ ಎತ್ತಿದರು.
ಇದನ್ನೂ ಓದಿ: ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಭಾರಿ ಪ್ರಾಂಶುಪಾಲರ ನೇಮಕ, ಉಪನ್ಯಾಸಕರ ವರ್ಗಾವಣೆಗೆ ಮತ್ತೆ ಚಾಲನೆ