ಮಂಗಳೂರು: ಯೆಯ್ಯಾಡಿಯಲ್ಲಿ 2018ರ ಸೆಪ್ಟೆಂಬರ್ 20ರಂದು ನಡೆದ ಡೇನಿಯಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಏಳು ವರ್ಷ ಕಠಿಣ ಸಜೆ ಮತ್ತು ₹ 10 ಸಾವಿರ ದಂಡ ವಿಧಿಸಿದೆ.
ಬಿಜೈ ಬಾರೆಬೈಲು ನಿವಾಸಿ ಜಗದೀಶ್ ಶೆಟ್ಟಿ (49) ಶಿಕ್ಷೆಗೊಳಗಾದ ಅಪರಾಧಿ. ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮಧ್ಯೆ ನಡೆದ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣ ವಿವರ: ಕೊಲೆಯಾದ ಡೇನಿಯಲ್ ಪೈಂಟರ್ ಕೆಲಸ ಮಾಡಿಕೊಂಡಿದ್ದ. ಆರೋಪಿ ಜಗದೀಶ್ ಶೆಟ್ಟಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇವರಿಬ್ಬರು ರಾತ್ರಿ ವೇಳೆ ಮನೆಗೆ ಹೋಗದೆ ಯೆಯ್ಯಿಡಿ ಪ್ಲೈವುಡ್ ಮಳಿಗೆ ಸಮೀಪ ಮಲಗುತ್ತಿದ್ದರು. ಪ್ರತಿನಿತ್ಯ ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದರು. ಇದೇ ರೀತಿ 2018ರ ಸೆ.20ರಂದು ರಾತ್ರಿ ವೇಳೆ ಮದ್ಯಪಾನ ಮಾಡಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದರು. ಆಗ ನಿಂದಿಸಿದ ಡೇನಿಯಲ್ ಮೇಲೆ ಜಗದೀಶ್ ಶೆಟ್ಟಿ ಕಲ್ಲು ಹಾಕಿ ಹತ್ಯೆ ಮಾಡಿದ್ದ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.