ಮಂಗಳೂರು: ಮಂಗಳೂರಿನ ಕಿರಿಯ ಪ್ರಧಾನ ಸಿವಿಲ್ ನ್ಯಾಯಾಲಯವು 'ಗಿರ್ ಗಿಟ್' ತುಳು ಸಿನಿಮಾ ಪ್ರದರ್ಶನ ಮಾಡದಂತೆ ತಡೆಯಾಜ್ಞೆ ನೀಡಿದೆ ಎಂದು ಮಂಗಳೂರು ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ವಕೀಲರಾದ ಹೆಚ್.ವಿ.ರಾಘವೇಂದ್ರ ಹೇಳಿದರು.
ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಗಿರ್ ಗಿಟ್' ತುಳು ಚಿತ್ರದಲ್ಲಿ ವಕೀಲರಿಗೆ, ನ್ಯಾಯಾಲಯಕ್ಕೆ ಹಾಗೂ ನ್ಯಾಯಾಧೀಶರಿಗೆ ಅವಮಾನ ಮಾಡುವಂತೆ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘ, ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿ.ರಾಘವೇಂದ್ರ, ನ್ಯಾಯಾಧೀಶರಿಗೆ ಹಲ್ಲೆ ಮಾಡುವ ದೃಶ್ಯ, ವಕೀಲರನ್ನು ಪೆದ್ದನ ರೀತಿಯಲ್ಲಿ ಚಿತ್ರಿಸಿದ್ದು ಇದು ವಕೀಲರಿಗೆ, ನ್ಯಾಯಾಧೀಶರಿಗೆ ಮಾಡಿದ ಅವಮಾನ. ಇದೀಗ ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು.
ಚಲನಚಿತ್ರ ಬಿಡುಗಡೆಯಾಗಿ ಮೂರು ವಾರಗಳ ಬಳಿಕ ಯಾಕೆ ನೀವು ದಾವೆ ಹೂಡಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಕೀಲರಾದ ನಾವು ಯಾವಾಗಲೂ ವಿಪರೀತ ಒತ್ತಡದಲ್ಲಿರುತ್ತೇವೆ. ಆದ್ದರಿಂದ ಯಾರು ಮೊದಲೇ ಚಲನಚಿತ್ರ ವೀಕ್ಷಣೆ ಮಾಡಿರಲಿಲ್ಲ. ಆದರೆ ನಮ್ಮ ಕೆಲ ವಕೀಲರು ಬಳಿಕ ಚಲನಚಿತ್ರ ನೋಡಿ ನಮ್ಮ ಬಾರ್ ಅಸೋಸಿಯೇಷನ್ಗೆ ಮೌಖಿಕ ಹಾಗೂ ಲಿಖಿತ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೋರ್ಟ್ನಲ್ಲಿ ದಾವೆ ಹೂಡಿದೆವು ಎಂದರು.
ಸೆಪ್ಟೆಂಬರ್ 5ಕ್ಕೆ ನಮಗೆ ಈ ಬಗ್ಗೆ ದೂರು ಸಲ್ಲಿಕೆಯಾಯಿತು. 6ರಂದು ನಾವು ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಬಳಿಕ 7ರಂದು ಸಂಬಂಧಪಟ್ಟ ದಾಖಲೆಗಳನ್ನು ಇರಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆವು. ನಾವು ತಡೆಯಾಜ್ಞೆ ತಂದಿರುವುದು ಈಗಾಗಲೇ ಅವರಿಗೆ ತಿಳಿದು ಬಂದಿದೆ. ಅದರ ಬಳಿಕವೂ ಅವರು ಚಲನಚಿತ್ರ ಪ್ರದರ್ಶನ ಮಾಡಿದ್ದಲ್ಲಿ ವಕೀಲರ ಸಂಘದ ವತಿಯಿಂದ ಇನ್ನೂ ಹೆಚ್ಚಿನ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ತುಳು ಚಿತ್ರ ಕಲಾವಿದರ ತಂಡ ನಮ್ಮನ್ನು ಭೇಟಿಯಾಗಿ ಮೌಖಿಕ ಮಾತುಕತೆ ನಡೆಸಿದೆ. ಈ ಬಗ್ಗೆ ನಮಗೆ ಲಿಖಿತ ಮನವಿ ಮಾಡಿದ್ದಲ್ಲಿ, ನಾವು ನಮ್ಮ ಸಂಘದ ಹಿರಿಯ ವಕೀಲರಲ್ಲಿ ಹಾಗೂ ಸಮಿತಿಯಲ್ಲಿ ಚರ್ಚೆ ಮಾಡಿ ಅದರ ಬಗ್ಗೆ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಕೀಲ ರಾಘವೇಂದ್ರ ತಿಳಿಸಿದರು.