ಪುತ್ತೂರು : ದೇವಳದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ಮನೆಗಳನ್ನು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರ ನೇತೃತ್ವದಲ್ಲಿ ಮಂಗಳವಾರ ಜೆಸಿಬಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು.
ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಭಂಡಾರದ ಹಕ್ಕಿನ ಸ್ಥಳ ನೆಲ್ಲಿಕಟ್ಟೆ ಎಂಬಲ್ಲಿ ದೇವಾಲಯದ ಅನುಮತಿ ಇಲ್ಲದೆ ಮೂರು ಹೊಸಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಭಕ್ತರೊಬ್ಬರ ದೂರಿನ ಮೇರೆಗೆ ಅನಧಿಕೃತ ಮನೆಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಸಲಾಯಿತು.
ನೆಲ್ಲಿಕಟ್ಟೆಯಲ್ಲಿರುವ 12 ಸೆಂಟ್ಸ್ ಸ್ಥಳವು ಮಹಾಲಿಂಗೇಶ್ವರ ದೇವಾಲಯದ ಭಂಡಾರದ ಹಕ್ಕಿಗೆ ಒಳಪಟ್ಟಿದೆ. ಆದ್ರೆ, ಅಲ್ಲಿ ಅನ್ಯ ಮತೀಯರೊಬ್ಬರ ಹಳೆಯ ಮನೆ ಇತ್ತು. ಸ್ಥಳ ಬಾಡಿಗೆಯ ಮೇಲೆ ಇವರು ವಾಸಿಸುತ್ತಿದ್ದರು.
ಕೆಲವು ದಿನಗಳ ಹಿಂದೆ ಹಳೆಯ ಮನೆ ಕೆಡವಿ ಹಾಕಿ ಇದೇ ಸ್ಥಳದಲ್ಲಿ ಮೂರು ಹೊಸ ಮನೆಗಳನ್ನು ನಿರ್ಮಿಸಲು ಅಡಿಪಾಯ ಹಾಕಲಾಗಿತ್ತು. ಈ ಕಾಮಗಾರಿಗೆ ದೇವಾಲಯದಿಂದ ಅನುಮತಿ ಪಡೆದಿರಲಿಲ್ಲ. ನಗರಸಭೆಯಿಂದಲೂ ಕಟ್ಟಡ ನಿರ್ಮಾಣದ ಪರವಾನಿಗೆ ಪಡೆದಿರಲಿಲ್ಲ.
ಮನೆ ನಿರ್ಮಾಣದ ವಿರುದ್ದ ದೂರು : ಅನ್ಯ ಮತೀಯರು ದೇವಾಲಯ ಭಂಡಾರದ ಹಕ್ಕಿನ ಸ್ಥಳದಲ್ಲಿ ಅಕ್ರಮವಾಗಿ ಹಾಗೂ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಸಂಸ್ಥೆಯ ಕಾನೂನಿಗೆ ವಿರುದ್ಧವಾಗಿ ಮನೆಗಳನ್ನು ನಿರ್ಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯದ ಭಕ್ತರ ಪರವಾಗಿ ಪುತ್ತೂರಿನ ಹಿಂದೂ ಸಂಘಟನೆಗಳ ಕಾರ್ಯಕರ್ತ ದಿನೇಶ್ ಕುಮಾರ್ ಜೈನ್, ದೇವಾಲಯದ ಆಡಳಿತಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು, ನಗರಸಭೆಗೆ ಲಿಖಿತ ದೂರು ಸಲ್ಲಿಸಿದ್ದರು.
ಮನೆ ತೆರವು ಕಾರ್ಯಾಚರಣೆ : ದಿನೇಶ್ ಕುಮಾರ್ ಜೈನ್ ನೀಡಿರುವ ಲಿಖಿತ ದೂರಿನಂತೆ ಪ್ರಕರಣದ ತನಿಖೆ ನಡೆಸಿದ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಯವರು ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸು ಜಾರಿ ಮಾಡಿ ಮಂಗಳವಾರ ಕಾರ್ಯಾಚರಣೆ ನಡೆಸಿದರು. ಕಟ್ಟಡ ತೆರವುಗೊಳಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದರೂ ಕೂಡ ಕಾರ್ಯಾಚರಣೆ ನಡೆಸಲಾಯಿತು.
ಯಾತ್ರೀ ನಿವಾಸ ನಿರ್ಮಾಣಕ್ಕೆ ಆಗ್ರಹ : ಕಾರ್ಯಾಚರಣೆ ನಡೆಸಿದ ನೆಲ್ಲಿಕಟ್ಟೆ ನಿವೇಶನದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವತಿಯಿಂದ ಯಾತ್ರಿ ನಿವಾಸ ನಿರ್ಮಿಸಲು ಭಕ್ತರು ಒತ್ತಾಯಿಸಿದ್ದಾರೆ. ಈ ಸ್ಥಳದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಯಾವುದೇ ಕಾರಣಕ್ಕೂ ಈ ನಿವೇಶನದಲ್ಲಿ ಹಿಂದೂಯೇತರರಿಗೆ ಯಾವುದೇ ಉದ್ದೇಶಕ್ಕಾಗಿಯೂ ಬಳಕೆ ಮಾಡಲು ಅವಕಾಶ ನೀಡಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ.
ಕಾನೂರು ಉಲ್ಲಂಘಿಸಿ ಮನೆ ನಿರ್ಮಾಣ : ದೇವಸ್ಥಾನಕ್ಕೆ ಸೇರಿದ್ದ ಜಾಗದಲ್ಲಿ ಹಿಂದಿನ ಆಡಳಿತ ವ್ಯವಸ್ಥೆಯ ಜವಾಬ್ದಾರಿಯ ಕೊರತೆಯಿಂದಾಗಿ ಅನ್ಯಮತೀಯರಿಗೆ ಅಲ್ಲಿ ಸ್ಥಳ ಬಾಡಿಗೆಗೆ ಇರಲು ಅವಕಾಶ ಸಿಕ್ಕಿತ್ತು. ಮುಜುರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟ ದೇವಸ್ಥಾನ ಅಥವಾ ಇಲಾಖೆಯ ಜಾಗದಲ್ಲಿ ಗುತ್ತಿಗೆ ಬಾಡಿಗೆಗೆ ಅವಕಾಶವಿಲ್ಲ ಎಂದು ಕಾನೂನು ಹೇಳುತ್ತದೆ. ಆದರೂ ಅಲ್ಲಿ ಬಾಡಿಗೆಗಿದ್ದ ಶೇಖ್ ಇಸಾಕ್ ಮತ್ತು ಅವರ ಸಹೋದರ ಶೇಖ್ ಜೈನುದ್ದೀನ್ ಅಲ್ಲಿದ್ದ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.