ಪುತ್ತೂರು : ವಾರದೊಳಗೆ ರಾಜ್ಯ ಸರ್ಕಾರ ನೀಡುವ ಪಡಿತರ ಕಾರ್ಡ್ ವಿತರಣೆ ಪೂರ್ಣಗೊಳ್ಳಲಿದೆ. ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ನೀಡಲಾಗುವ ಪಡಿತರ ವಿತರಣೆ ಆರಂಭಗೊಳ್ಳಲಿದ್ದು, ಯಾವುದೇ ಆತಂಕ ಪಡಬೇಕಾಗಿಲ್ಲ.
ಏಪ್ರಿಲ್ 2ರಿಂದ ರಾಜ್ಯ ಸರ್ಕಾರ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಪಡಿತರ ಕಾರ್ಡ್ ನೀಡುವ ಕಾರ್ಯ ಆರಂಭಿಸಿದೆ. 2 ತಿಂಗಳ ಸಾಮಾಗ್ರಿಗಳನ್ನು ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಅಂತಿಮ ಗಡುವಿಲ್ಲ. ಆದರೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅಕ್ಕಿ ಮತ್ತು ಬೇಳೆ ವಿತರಣೆ ಮಾಡುವುದರಿಂದ ರಾಜ್ಯ ಸರ್ಕಾರ ಪಡಿತರ ನೀಡುವ ಕಾರ್ಯ ಬೇಗನೆ ಮುಗಿಸಬೇಕಿದೆ.
ತಾಲೂಕಿಗೆ 25,620 ಕ್ವಿಂಟಲ್ ಅಕ್ಕಿ : ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ವತಿಯಿಂದ ಪುತ್ತೂರು ತಾಲೂಕಿಗೆ ಮುಂದಿನ ಮೂರು ದಿನಗಳಲ್ಲಿ 25,620 ಕ್ವಿಂಟಲ್ ಅಕ್ಕಿ ಮತ್ತು ಬೇಳೆ ಬರಲಿದೆ. ಇದನ್ನು ತೆಂಕಿಲ ವಿವೇಕಾನಂದ ಪ್ರೌಢಶಾಲೆಯಲ್ಲಿ ದಾಸ್ತಾನು ಇರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಡಿ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಮಾತ್ರ ವಿತರಣೆಯಾಗಲಿದೆ. ಬಡ ಎಪಿಎಲ್ ಕಾರ್ಡುದಾರರಿಗೆ ಈ ಯೋಜನೆಯಲ್ಲಿ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಲಾಗಿಲ್ಲ.
ಈ ಯೋಜನೆಯಡಿ ಕುಟುಂಬ ಪ್ರತಿ ಸದಸ್ಯನೊಬ್ಬನಿಗೆ 3 ತಿಂಗಳಿಗೆ 15 ಕೆಜಿ ಅಕ್ಕಿ ವಿತರಣೆ ನಡೆಯಲಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳು ಏಕಕಾಲದಲ್ಲಿ ಜನತೆಗೆ ದೊರೆಯಲಿದೆ. ಕೊರೊನಾ ಭೀತಿ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಡಿತರ ವಿತರಣೆಗೆ ಯಾವುದೇ ಗಡುವು ನೀಡಿಲ್ಲ. ಹಿಂದೆ ರಾಜ್ಯ ಸರ್ಕಾರದ ಪಡಿತರ ವಿತರಣೆಗೆ ಗಡುವು ನೀಡಿತ್ತು. ಈಗ ಅಂತಹ ಅಂತಿಮ ಗಡುವು ವಿಧಿಸಲಾಗಿಲ್ಲ. ಕಳೆದ ಕೆಲ ದಿನಗಳಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ನಡೆಯುತ್ತಿದೆ. ಜನತೆ ಬಿಸಿಲಿನಲ್ಲಿ ಸಾಲಾಗಿ ನಿಂತು ಪರದಾಟ ನಡೆಸುವಂತಾಗಿತ್ತು. ಇದೀಗ ಸಮಯ ವಿಧಿಸದ ಕಾರಣ ಜನತೆ ಅಕ್ಕಿಗಾಗಿ ಆತಂಕ ಪಡಬೇಕಾಗಿಲ್ಲ.
ಅಕ್ಕಿ ಬೇಕಾದಷ್ಟಿದೆ ಆತಂಕ ಬೇಡ : ರಾಜ್ಯ ಸರ್ಕಾರದ ವತಿಯಿಂದ 11 ಸಾವಿರ ಕ್ವಿಂಟಲ್ ಅಕ್ಕಿ ಈಗಾಗಲೇ ತಾಲೂಕಿಗೆ ಸರಬರಾಜುಗೊಂಡಿದೆ. ಇದರಲ್ಲಿ ಶೇ.80ರಷ್ಟು ಪಡಿತರ ವಿತರಣೆ ನಡೆದಿದೆ. ಮುಂದಿನ ಕೆಲವು ದಿನಗಳಲ್ಲಿ ಪಡಿತರ ವಿತರಣೆ ಪೂರ್ಣಗೊಳ್ಳಲಿದೆ. ತಕ್ಷಣವೇ ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ಪಡಿತರವಾಗಿರುವ ಅಕ್ಕಿ ಮತ್ತು ಬೇಳೆ ಬರಲಿದೆ.