ಸುಳ್ಯ(ದಕ್ಷಿಣ ಕನ್ನಡ): ಮಧ್ಯರಾತ್ರಿ ವೇಗವಾಗಿ ಬಂದ ಕಾರೊಂದು ಉಕ್ಕಿ ಹರಿಯುವ ಹೊಳೆಗೆ ಬಿದ್ದ ಘಟನೆ ಪುತ್ತೂರು ತಾಲೂಕಿನ ಕಾಣಿಯೂರು ಸಮೀಪ ಸಂಭವಿಸಿದೆ. ಅವಘಡಕ್ಕೂ ಹಿಂದಿನ ಸಿಸಿಟಿವಿ ದೃಶ್ಯ ದೊರೆತಿದೆ. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರಿನ ಬೈತ್ತಡ್ಕ ಮಸೀದಿಯ ಸಮೀಪದ ಗೌರಿಹೊಳೆಗೆ ಕಾರು ಬಿದ್ದಿದೆ.
ಪುತ್ತೂರು ಕಡೆಯಿಂದ ಕಾಣಿಯೂರು ಮಾರ್ಗವಾಗಿ ಸಂಚರಿಸುತ್ತಿದ್ದ ಕಾರಿನ ಬೋನೆಟ್‌ನ ಒಂದು ಭಾಗ ಸಿಕ್ಕಿದ್ದು, ಮಾರುತಿ 800 ಕಾರು ಎಂದು ಗುರುತಿಸಲಾಗಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆಬೇಲಿಯ ಮೂರು ಕಂಬಗಳು ಜಖಂಗೊಂಡಿವೆ.
ಘಟನೆ ನಡೆದ ಸುಮಾರು ನೂರು ಮೀಟರ್ ದೂರದಲ್ಲಿ ಹೊಳೆಯಲ್ಲಿ ಕಾರು ಪತ್ತೆಯಾಗಿದೆ. ಆದರೆ ವಾಹನದಲ್ಲಿದ್ದವರು ಕೊಚ್ಚಿಕೊಂಡು ಹೋಗಿದ್ದಾರೆ. ಕಾರಿನಲ್ಲಿ ಎಷ್ಟು ಜನರಿದ್ದರು?, ಕಾರು ಯಾರದ್ದು? ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ, ಹೊಳೆ ತುಂಬಿ ಹರಿಯುತ್ತಿದ್ದರೂ ಲೆಕ್ಕಿಸದ ಜನರು ಸೇತುವೆ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅಪಾಯಗಳು ಸಂಭವಿಸುತ್ತಿದ್ದರೂ ಜನರ ನಿರ್ಲಕ್ಷ್ಯ, ಹುಚ್ಚಾಟ ಮುಂದುವರೆದಿದೆ.
ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಟಿಪ್ಪರ್ ಡಿಕ್ಕಿ, ಮಹಿಳೆ ಸಾವು