ಮಂಗಳೂರು: ಸಿನಿಮಾ ಸ್ಟೈಲ್‌ನಲ್ಲಿ ಕ್ರೂರವಾಗಿ ಮೀನುಗಾರನನ್ನು ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲರೂ ಮೀನುಗಾರ ಕಾರ್ಮಿಕರಾಗಿದ್ದು, ಡಿಸೆಂಬರ್ 15 ರಂದು ಮೀನುಗಾರಿಕೆಗೆ ತೆರಳಬೇಕಿತ್ತು. ಇದಕ್ಕಾಗಿ ಡಿಸೆಂಬರ್ 14 ರಂದು ಸಣ್ಣ ಪಾರ್ಟಿ ಇಟ್ಟುಕೊಂಡಿದ್ದರು. ಈ ಪಾರ್ಟಿ ಮುಗಿಸಿ ವೈಲ ಶೀನು (32) ಎಂಬಾತ ರಾತ್ರಿ ಬೋಟ್‌ನಲ್ಲಿ ಮಲಗಿದ್ದ. ಮರುದಿನ ಬೆಳಗ್ಗೆ ಬೋಟ್ ಬಳಿಗೆ ಬಂದ ಆರೋಪಿಗಳು ಪಾರ್ಟಿ ವೇಳೆ ಮೊಬೈಲ್ ಕದ್ದ ಆರೋಪ ಮಾಡಿ ಆತನ ಕಾಲಿಗೆ ಹಗ್ಗ ಕಟ್ಟಿ ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು.
ಇದರ ವಿಡಿಯೋ ವೈರಲ್ ಆಗಿದ್ದು ಆರಂಭದಲ್ಲಿ ಅದರಲ್ಲಿನ ಸಂಭಾಷಣೆ ನೋಡಿ ತಮಿಳುನಾಡು ಕಡೆಯಲ್ಲಿ ನಡೆದಿರಬಹುದೆಂದು ಶಂಕಿಸಲಾಗಿತ್ತು. ಬಳಿಕ ಕೂಲಂಕಷವಾಗಿ ಗಮನಿಸಿದಾಗ ಮಂಗಳೂರಿನ ದಕ್ಕೆಯಲ್ಲಿ ನಡೆದ ಘಟನೆ ಎಂದು ತಿಳಿದುಬಂದಿತ್ತು. ತನಿಖೆ ನಡೆಸಿ ಸಂತ್ರಸ್ತನನ್ನು ಪತ್ತೆ ಹಚ್ಚಿದ್ದಾರೆ. ಆತನಿಂದ ದೂರು ಪಡೆದುಕೊಂಡು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಹಲ್ಲೆಗೊಳಗಾದ ಬಳಿಕ ಸಂತ್ರಸ್ತ ಮೀನುಗಾರ ಸಣ್ಣ ಚಿಕಿತ್ಸೆ ಪಡೆದುಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿ ಕಾರವಾರಕ್ಕೆ ತೆರಳಿದ್ದ. ಆರೋಪಿಗಳು ಪ್ರಕರಣ ದಾಖಲಾಗುವ ಭಯದಲ್ಲಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಹಲ್ಲೆಗೆ ಕಾರಣವಾದ ಮೊಬೈಲ್ ಸಂತ್ರಸ್ತನಲ್ಲಿ ಪತ್ತೆಯಾಗಿಲ್ಲ. ಈ ರೀತಿ ಕ್ರೂರವಾಗಿ ಹಲ್ಲೆ ನಡೆಸಲು ಯಾವುದಾದರೂ ಸಿನಿಮಾ ಪ್ರೇರಣೆ ಇದೆಯೇ ಎಂಬುದನ್ನು ಅವರ ಮೊಬೈಲ್ ಬ್ರೌಸರ್ ಹಿಸ್ಟರಿ ನೋಡಿ ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಇದನ್ನೂ ಓದಿ: ತುಮಕೂರು: 21ಕ್ಕೆ ಪ್ರೀತಿ-ಗೀತಿ ಯಾಕೆ ಎಂದಿದ್ದಕ್ಕೆ ಡೀಸೆಲ್ ಸುರಿದುಕೊಂಡು ಯುವಕ ಸಾವು