ಕಡಬ: ನಾಲ್ಕು ಚಕ್ರಗಳ ವೈಯಕ್ತಿಕ ವಾಹನ ಇದ್ದರೂ ನಿಯಮಕ್ಕೆ ವಿರುದ್ಧವಾಗಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯದ ಸುಮಾರು 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಸರ್ಕಾರ ಅನರ್ಹ ಪಡಿತರ ಚೀಟಿಗಳನ್ನು ಹಿಂದೆ ಪಡೆಯಲು ಹಲವು ಅವಕಾಶ ನೀಡಿದ್ದರೂ ನಿರ್ಲಕ್ಷಿಸಿದ ಅನರ್ಹರ ಮಾಹಿತಿಗಳನ್ನು ಸಂಗ್ರಹಿಸಿ ಅವರಿಂದ ಈವರೆಗೆ ಪಡೆದ ಆಹಾರ ಸಾಮಗ್ರಿಗೆ ಇಲಾಖೆಯು ದಂಡ ವಸೂಲಿ ಮಾಡಲಿದೆ ಎನ್ನಲಾಗಿದೆ.
ಏನಿದು ಅನರ್ಹತೆ?: ನಾಲ್ಕುಚಕ್ರ ವಾಹನ ಇರುವವರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಈಗಾಗಲೇ ದಂಡರಹಿತವಾಗಿ 2019ರ ಸೆಪ್ಟೆಂಬರ್ 3ರೊಳಗೆ ರದ್ದು ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಆ ಬಳಿಕ ಈ ಅವಧಿಯನ್ನು ಅ.15ರ ತನಕ ವಿಸ್ತರಿಸಿತು. ಹೀಗೆ ನಾಲ್ಕಾರು ಬಾರಿ ಸರೆಂಡರ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ರದ್ದು ಮಾಡದ ಅನರ್ಹ ಪಡಿತರ ಚೀಟಿದಾರರಿಗೆ ದಂಡ ವಿಧಿಸಲು ಇದೀಗ ಇಲಾಖೆ ಕ್ರಮ ಕೈಗೊಂಡಿದೆ.
ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ: ನಾಲ್ಕು ಚಕ್ರಗಳ ವಾಹನ ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರ ಕುಟುಂಬಗಳ ಮಾಹಿತಿ ನೀಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಕರ್ನಾಟಕ ಸಾರಿಗೆ ಇಲಾಖೆಯನ್ನು ಕೋರಿತ್ತು. ಇಲಾಖೆಯು ಅಂತವರ ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡಿದೆ ಎನ್ನಲಾಗಿದೆ. ಇದರನ್ವಯ ಆಯಾ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರ ಅಥವಾ ನಿರೀಕ್ಷಕರಿಗೆ ಅನರ್ಹ ಪಡಿತರ ಚೀಟಿದಾರರ ಪಟ್ಟಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿಯಮ ಉಲ್ಲಂಘಿಸಿದ ಹಲವರಿಗೆ ಈಗಾಗಲೇ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ದಾಖಲೆಗಳು, ಹೆಸರಿನ ವ್ಯತ್ಯಾಸ ಗೊಂದಲ ಇದ್ದಲ್ಲಿ ಸ್ಥಳ ಪರಿಶೀಲಿಸುವ ಅಧಿಕಾರವನ್ನು ನೀಡಲಾಗಿದ್ದು, ಅನರ್ಹರು ದಂಡ ಪಾವತಿಸಲೇ ಬೇಕಿದೆ. ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ ನಿಗದಿ ಪಡಿಸಲಾಗಿದೆ.
ಜಿಲ್ಲಾವಾರು ಅನರ್ಹ ಬಿಪಿಎಲ್ ಕಾರ್ಡ್ಗಳ ಪಟ್ಟಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 121, ಉಡುಪಿಯಲ್ಲಿ 36 ಸೇರಿ ಒಟ್ಟು 172 ಅನರ್ಹ ಪಡಿತರ ಚೀಟಿಗಳು ಇವೆ. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದಂತೆ 34 ಜಿಲ್ಲೆಗಳಲ್ಲಿ ಸುಮಾರು 12,012 ಪಡಿತರ ಚೀಟಿದಾರರು ದಂಡ ಕಟ್ಟಬೇಕಿದೆ.
ಇನ್ನುಳಿದಂತೆ ಗರಿಷ್ಠ ಎಂದರೆ ಕಲುಬುರಗಿಯಲ್ಲಿ 2,026, ಚಿಕ್ಕಮಗಳೂರಿನಲ್ಲಿ 1,838, ಬೆಂಗಳೂರಿನಲ್ಲಿ-1273 ಅನರ್ಹ ಬಿಪಿಎಲ್ ಕಾರ್ಡುಗಳಿವೆ. ಕನಿಷ್ಠ ಅನರ್ಹ ಕಾರ್ಡುಗಳ ಪಟ್ಟಿಯಲ್ಲಿ ಗದಗ 13, ಧಾರವಾಡ 15, ಮತ್ತು ಕೊಡಗು ಜಿಲ್ಲೆಯಲ್ಲಿ 21 ಕಾರ್ಡುಗಳಿವೆ. ಇನ್ನು ಅಂತ್ಯೋದಯ ಪಟ್ಟಿಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 572 ಅನರ್ಹ ಕಾರ್ಡುಗಳಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಮತ್ತು ಉಡುಪಿಯಲ್ಲಿ 6 ಪಡಿತರ ಚೀಟಿಗಳಿವೆ.
ಈಗಾಗಲೇ ನಾಲ್ಕು ಚಕ್ರಗಳ ವೈಯಕ್ತಿಕ ವಾಹನವನ್ನು ಸ್ವಂತ ಬಳಕೆಗೆ ಹೊಂದಿರುವ ಪಡಿತರ ಚೀಟಿದಾರರ ಪಟ್ಟಿಯನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಅನರ್ಹ ಪಡಿತರ ಚೀಟಿ ಎಂದು ದೃಢಪಟ್ಟ ಪಡಿತರ ಚೀಟಿದಾರರು ಈ ತನಕ ಪಡೆದಿರುವ ಪಡಿತರ ಸಾಮಗ್ರಿಗಳ ಮೌಲ್ಯವನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಮರುಪಾವತಿಸಬೇಕು.
ಪಡಿತರ ಚೀಟಿ ಮತ್ತು ವಾಹನ ನೋಂದಾಣಿ ಆದ ದಿನಾಂಕವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಗಮನಿಸಿ, ಮತ್ತು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮೊದಲೇ ವಾಹನ ಹೊಂದಿದ್ದರೆ ಆತ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಇವರಿಗೆ ದಂಡದ ಪ್ರಮಾಣ ಹೆಚ್ಚಿರುತ್ತದೆ. ಪಡಿತರ ಚೀಟಿ ಆದ ಬಳಿಕ ವಾಹನ ಖರೀದಿಸಿದ್ದರೆ, ವಾಹನ ಪಡೆದ ದಿನದಿಂದ ದಂಡ ಅನ್ವಯ ಆಗುತ್ತದೆ.
ಕಾರ್ಡುದಾರ ಈ ತನಕ ಪಡೆದಿರುವ ಪಡಿತರ ಸಾಮಗ್ರಿಗೆ ಈಗಿನ ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ ಕಟ್ಟಬೇಕು. ಅಂದರೆ ಪಡಿತರ ಇಲಾಖೆಯಿಂದ 1 ರೂ.ಗೆ ಅಕ್ಕಿ ಪಡೆಯುತ್ತಿದ್ದರೆ ಈಗಿನ ಮಾರುಕಟ್ಟೆ ಮೌಲ್ಯ ಪ್ರತಿ ಕೆ.ಜಿ.ಗೆ 28 ರೂ.ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ಆರಂಭದಿಂದ ಈ ತನಕ ಪಡೆದ ಪಡಿತರ ಸಾಮಗ್ರಿಗೆ ಈಗಿನ ಮಾರುಕಟ್ಟೆ ಮೌಲ್ಯ ಪ್ರಕಾರವೇ ದಂಡ ಪಾವತಿಸಬೇಕು.
ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ಕಾರ್ಡುದಾರ ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಬೇಕು. ಅಲ್ಲಿ ಪಾವತಿಸಬೇಕಾದ ದಂಡದ ಮೊತ್ತವನ್ನು ತಿಳಿಸಲಾಗುತ್ತದೆ. ಈ ಮೊತ್ತವನ್ನು ಸರ್ಕಾರದ ಟ್ರೆಜರಿಗೆ ಪಾವತಿಸಬೇಕಾದ ಚಲನ್ ನೀಡಲಾಗುತ್ತದೆ. ಬ್ಯಾಂಕ್ನಲ್ಲಿ ದಂಡ ಮೊತ್ತ ಕಟ್ಟಿದ ರಶೀದಿಯನ್ನು ಪುನಃ ಅಹಾರ ನಿರೀಕ್ಷಕರಿಗೆ ನೀಡಬೇಕು. ಅದಾದ ಬಳಿಕ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ. ರಶೀದಿ ಒಪ್ಪಿಸುವ ತನಕ ಪಡಿತರ ಚೀಟಿಯನ್ನು ಅಮಾನತಿನಲ್ಲಿ ಇರಿಸಲಾಗುತ್ತದೆ.
ಇದನ್ನೂ ಓದಿ: ಅನರ್ಹರು ಬಿಪಿಎಲ್ ಕಾರ್ಡ್ ಹಿಂತಿರುಗಿಸಲು ಜೂನ್ 30 ಅಂತಿಮ ಗಡುವು