ಪುತ್ತೂರು: ಇಂದು ಕರ್ನಾಟಕದಲ್ಲಿ ಕನ್ನಡಿಗರನ್ನು, ಭಾರತೀಯರನ್ನು ಒಡೆದು ಬೇರೆ ಬೇರೆ ಮಾಡುವ ಕೆಲಸವನ್ನು ಕೋಮುವಾದಿ ಬಿಜೆಪಿ, ಆರ್ಎಸ್ಎಸ್ ಮಾಡುತ್ತಿದೆ. ನಾವು ಸಂವಿಧಾನ ಗೌರವಿಸುವವರಾಗಿದ್ದು ಕ್ರಿಶ್ಚಿಯನರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್, ಹಿಂದೂಗಳಿಗೆ ಭಗವದ್ಗೀತೆಯೇ ಸಂವಿಧಾನ. ನಾವೆಲ್ಲರೂ ಒಂದಾಗಿ ಕೋಮುವಾದಿಗಳಿಗೆ ನಮ್ಮ ಶಕ್ತಿ ತೋರಿಸಬೇಕಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.
ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಭಾಭವನದಲ್ಲಿ ಬುಧವಾರ ಸಂಜೆ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡಿ ಸಮಾಜವನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂತ್ ರಚಿಸಬೇಕು. ಪ್ರತಿ ಬೂತ್ ಮಟ್ಟದಲ್ಲಿ ಕ್ರಿಯಾಶೀಲರಾಗಿರುವ ಒಬ್ಬರನ್ನು ಆಯ್ಕೆ ಮಾಡಿ, ಇಡೀ ಬ್ಲಾಕ್ ವ್ಯಾಪ್ತಿಯ ಪಟ್ಟಿಯನ್ನು ನೀಡಬೇಕು ಎಂದು ತಿಳಿಸಿದರು.
ದೇಶದ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದೆ ಎಂದ ಅವರು, ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ, ಆರ್ಎಸ್ಎಸ್ ಇತ್ತಾ? ಎಂದು ಪ್ರಶ್ನಿಸಿದರು. ದೇಶದ ಇತಿಹಾಸವನ್ನು ಉಳಿಸುವುದು ಈ ಪಕ್ಷದವರಾದ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳಾದ ಅನಿಲ್ ಕುಮಾರ್ ಯಾದವ್ ಮತ್ತು ವಿದ್ಯಾ ಬಾಲಕೃಷ್ಣ, ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಯುವಕ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರು, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಯುವಕ ಕಾಂಗ್ರೆಸ್ ಮುಖಂಡರಾದ ಮೆರಿಲ್ ರೇಗೋ, ಆಶಿಫ್ ಪೆರೇರಾ, ನಾಸೀರ್ ಸಾಮಾನಿಗೆ, ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಉಪಾಧ್ಯಕ್ಷ ಗಿರೀಶ್ ಆಳ್ವ, ಪಾರೂಕ್ ಬಾಯಂಬೆ, ಪಕ್ಷದ ಮುಖಂಡರಾದ ಅನಿತಾ ಹೇಮನಾಥ ಶೆಟ್ಟಿ, ಫಝಲ್ ರಹೀಂ, ಮಹೇಶ್ ಅಂಕೋತಿಮಾರ್, ಸೂತ್ರಬೆಟ್ಟು ಜಗನ್ನಾಥ ರೈ, ವಾಣಿ ಶ್ರೀಧರ್,ವೀಣಾ ಭಟ್ ಮತ್ತಿತರರು ಇದ್ದರು.
ಇದನ್ನೂ ಓದಿ: ದೆಹಲಿ ಸಿಎಂ ಕ್ಷಮೆ ಕೇಳಬೇಕು..ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಕೆ: ತೇಜಸ್ವಿ ಸೂರ್ಯ