ಬಂಟ್ವಾಳ (ದ.ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಕಲಾವಿದ ರಶೀದ್ ತುಳುನಾಡ ಆರಾಧ್ಯ ದೈವ ಕೊರಗಜ್ಜನ ಕುರಿತು ಜಿ.ಎಸ್. ಗುರುಪುರ ರಚಿಸಿದ ಹಾಡನ್ನು ಕಂಪೋಸ್ ಮಾಡಿ ಹಾಡಿದ್ದು, ಅದೀಗ ಸಖತ್ ವೈರಲ್ ಆಗಿದೆ.
ಸೂಪರ್ವೈಸರ್ ವೃತ್ತಿಯನ್ನು ನಿರ್ವಹಿಸುತ್ತಿರುವ ರಶೀದ್ ಈಗಾಗಲೇ ಹಲವಾರು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಅವರ ವಿಡಿಯೋ ಆಲ್ಬಂಗಳು ಸಾವಿರಾರು ಮಂದಿಯ ಪ್ರಶಂಸೆಗೂ ಪಾತ್ರವಾಗಿದೆ. ಇದೀಗ ಕೊರಗಜ್ಜನ ಹಾಡನ್ನು ರಶೀದ್ ಹಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊರಗಜ್ಜನ ಬಗ್ಗೆ ಅಪಾರ ಭಕ್ತಿ, ಭಾವ ವ್ಯಕ್ತಪಡಿಸುವ ತುಳುವನಾಡ ಧರ್ಮ ತುಡರ್ ಹಾಡನ್ನು ಹಾಡುವ ಆಸಕ್ತಿ ವ್ಯಕ್ತಪಡಿಸಿದ ರಶೀದ್ ಕೆಲ ದಿನಗಳ ಹಿಂದೆ ಸ್ವರ ಸಂಯೋಜಿಸಿ ಹಾಡಿ, ಸ್ನೇಹಿತರಿಗೆ ಹಂಚಿಕೊಂಡಿದ್ದು, ನಂತರ ವೈರಲ್ ಆಯಿತು. ಸ್ನೇಹಿತರ ಸ್ಟೇಟಸ್ಗಳಲ್ಲೂ ಇದು ಕಂಡು ಬಂತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಸಿದ್ಧಿ ಪಡೆಯಿತು.
ಇತ್ತೀಚಿನ ದಿನಗಳಲ್ಲಿ ಸೌಹಾರ್ದತೆ ಕೊರತೆಯೂ ಸೇರಿದಂತೆ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ-ವಿಶ್ವಾಸ ಕುಂದುತ್ತಿರುವ ಸನ್ನಿವೇಶದಲ್ಲಿ ರಶೀದ್ ನಂದಾವರ ಹಾಡಿದ ಕೊರಗಜ್ಜನ ಹಾಡು ಹೊಸ ಅಲೆ ಸೃಷ್ಟಿಸಿದೆ.
ಬಂಟ್ವಾಳ ತಾಲೂಕಿನ ನಂದಾವರ ನಿವಾಸಿಯಾಗಿರುವ ಯುವಕ ರಶೀದ್ ಅವರು ತಮ್ಮ 15ನೇ ವಯಸ್ಸಿನಿಂದಲೇ ಹಾಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಮ್ಯೂಸಿಕ್ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಬಳಿಕ ಸ್ವತಃ ಕವನಗಳಿಗೆ ಹಾಡಿನ ರೂಪ ಕೊಟ್ಟು, ಸಂಗೀತ ನಿರ್ದೇಶಕರಾದರು. ತಂತ್ರಜ್ಞಾನ ಮುಂದುವರಿದ ನಂತರ ಯೂಟ್ಯೂಬ್ನಲ್ಲಿ ರಶೀದ್ ನಂದಾವರ ಕಂಪೋಸ್ ಮಾಡಿದ ಹಲವು ವಿಡಿಯೋ ಆಲ್ಬಂಗಳು ಹೊರಬಂದಿವೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ ಎನ್ನುತ್ತಾರೆ ರಶೀದ್.
ಇದನ್ನೂ ಓದಿ: ವಿವಿಧ ಕಂಪನಿಗಳಿಗೆ ಗ್ರಾಹಕರ ಮಾಹಿತಿ ನೀಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದವ ಅಂದರ್!
ರಶೀದ್ ಅವರದ್ದು ಎಲ್ಲ ಧರ್ಮೀಯರೊಂದಿಗೆ ಬೆರೆಯುವಂತಹ ವ್ಯಕ್ತಿತ್ವ. ಇದೀಗ ಕೊರಗಜ್ಜನ ಕುರಿತು ಹಾಡಿದ್ದು, ಸದಾ ಒಂದಿಲ್ಲೊಂದು ಘಟನೆಗಳ ಮೂಲಕ ಪರಸ್ಪರ ಸಂಬಂಧಗಳನ್ನು ಹಾಳು ಮಾಡುವ ಮನಸ್ಸಿನವರು, ಶಾಂತಿ ಕದಡುವ ಜಗತ್ತಿನಲ್ಲಿ ಸೌಹಾರ್ದದ ಅಲೆ ಸೃಷ್ಟಿಸಿದೆ. ನನ್ನ ಈ ಹಾಡನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ, ತುಳುನಾಡಿನಲ್ಲಿ ಸೌಹಾರ್ದತೆಗೆ ಇದು ಸಾಕ್ಷಿಯಾಗಿದೆ ಎಂದು ಬೆನ್ನು ತಟ್ಟುತ್ತಿದ್ದಾರೆ ಎನ್ನುತ್ತಾರೆ ರಶೀದ್.