ಪುತ್ತೂರು : ಕೆಎಸ್ಆರ್ಟಿಸಿ ಬಸ್ ಸಂಚಾರ ನಿಯಂತ್ರಣಾಧಿಕಾರಿಗೆ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ನಿನ್ನೆ ಅಂದ್ರೆ ಜ.13ರಂದು ಸಂಜೆ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಸುಬ್ರಹ್ಮಣ್ಯ ಭಟ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಕರ್ತವ್ಯದಲ್ಲಿರುವ ವೇಳೆ ಪ್ರಯಾಣಿಕನೋರ್ವ ಕಾಂಞಂಗಾಡಿಗೆ ಹೋಗುವ ಕೇರಳದ ಬಸ್ ಮಾಹಿತಿ ಕೇಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
'ನಾನು ಕರ್ತವ್ಯದಲ್ಲಿರುವ ವೇಳೆ ಕಾಂಞಂಗಾಡಿ ಹೋಗುವ ಕೇರಳದ ಬಸ್ ಮಾಹಿತಿ ಕೇಳಿದ ಪ್ರಯಾಣಿಕರೊಬ್ಬರಿಗೆ ಮಾಹಿತಿ ನೀಡಿದ್ದೆ. ಆದರೆ, ಸ್ವಲ್ಪ ಹೊತ್ತಿನ ನಂತರ ಬಂದ ಪ್ರಯಾಣಿಕನೋರ್ವ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಜತೆಗೆ ತನಗೆ ಬೆದರಿಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ' ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುಬ್ರಹ್ಮಣ್ಯ ಭಟ್ ಅವರು ದೂರಿದ್ದಾರೆ.
ಈ ಸಂಬಂಧ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಸುರತ್ಕಲ್ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 20 ಸಾವಿರದ ಗಡಿ ದಾಟಿದ ಕೋವಿಡ್ ಪ್ರಕರಣ.. ಐವರು ವಿದೇಶಿಯರಿಗೂ ಕೊರೊನಾ ದೃಢ!