ಮಂಗಳೂರು: ಕೋವಿಡ್ ಸೋಂಕಿತೆ ಎನ್ನುವ ಕಾರಣಕ್ಕಾಗಿ ಹೆರಿಗಾಗಿ ತನ್ನನ್ನು ಮಂಗಳೂರಿನ ಖ್ಯಾತ ಪ್ರಸೂತಿ ತಜ್ಞೆ ಸೇರಿ ಹಲವು ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದಾರೆ. ಇವರ ಮೇಲೆ ಈಗಾಗಲೇ ದೂರು ದಾಖಲಿಸಿದ್ದು, ತನಗೆ ನ್ಯಾಯ ದೊರಕಬೇಕೆಂದು ಎಂದು ಬಾಣಂತಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ನಗರದ ಸಂತ್ರಸ್ತೆ ಮುಳಿಹಿತ್ಲು ನಿವಾಸಿ ಖತೀಜಾ ಜಾಸ್ಮಿನ್ ಎಂಬವರು ಈ ಬಗ್ಗೆ ಮಾತನಾಡಿ, ತಾನು ಗರ್ಭಿಣಿಯಾಗಿರುವ ಸಂದರ್ಭ ಖ್ಯಾತ ಪ್ರಸೂತಿ ತಜ್ಞೆ ಡಾ.ಪ್ರಿಯಾ ಬಲ್ಲಾಳ್ ಅವರಲ್ಲಿ ತಪಾಸಣೆ ಮಾಡುತ್ತಿದ್ದೆ. ಸುಮಾರು 8 ತಿಂಗಳ ಹೊತ್ತಿಗೆ ನನಗೆ ಜ್ವರ, ಶೀತ ಕಾಣಿಸಿಕೊಂಡಿತ್ತು. ತಪಾಸಣೆ ನಡೆಸಿದಾಗ ಕೋವಿಡ್ ಪಾಸಿಟಿವ್ ಬಂದಿದೆ. ಆ ಬಳಿಕ ನನಗೆ ಆರೋಗ್ಯದಲ್ಲಿ ಏರುಪೇರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದರೂ, ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆ ಬಳಿಕ ನಾನು ಬೇರೆ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿನ ವೈದ್ಯರುಗಳು ವೈದ್ಯಕೀಯ ಚೀಟಿಯಲ್ಲಿರುವ ಹೆಸರು ನೋಡಿ ಡಾ.ಪ್ರಿಯಾ ಬಲ್ಲಾಳ್ ಅವರಿಗೆ ಕರೆ ಮಾಡಿದ್ದಾರೆ. ಆ ಬಳಿಕ ಎಲ್ಲರೂ ಚಿಕಿತ್ಸೆ ನಿರಾಕರಿಸಿದ್ದಾರೆ ಎಂದಿದ್ದಾರೆ
ಅಲ್ಲದೇ ವೈದ್ಯ ಡಾ.ಜಯಪ್ರಕಾಶ್ ಅವರು, 'ನಿನ್ನ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದೆ. ಇನ್ನೂ ಕೆಲವೇ ಗಂಟೆಗಳಲ್ಲಿ ಮೃತಪಡುತ್ತೀಯಾ' ಎಂದು ಎಲ್ಲರಲ್ಲೂ ಗಾಬರಿ ಹುಟ್ಟಿಸಿದ್ದರು. ಕೊನೆಗೆ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಅವರ ಸಹಾಯದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮನೀಡಿದ್ದೇನೆ. ಆದರೆ, ಈ ರೀತಿಯಲ್ಲಿ ಯಾರಿಗೂ ಆಗಬಾರದು. ಈ ಬಗ್ಗೆ ನಮಗೆ ನ್ಯಾಯ ದೊರಕಬೇಕು ಎಂದು ಖತೀಜಾ ಜಾಸ್ಮಿನ್ ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ಆಗುವಾಗ ಖತೀಜಾ ಜಾಸ್ಮಿನ್ ಜೊತೆಗಿದ್ದ ಅವರ ಚಿಕ್ಕಪ್ಪ ಸಂಶೀರ್ ಅಲಿ ಮಾತನಾಡಿ, ಅಂದು ನಾವು ಕೇವಲ 24 ಗಂಟೆಗಳಲ್ಲಿ 8 ಆ್ಯಂಬುಲೆನ್ಸ್ ಗಳಲ್ಲಿ 9 ಆಸ್ಪತ್ರೆಗಳನ್ನು ಸುತ್ತಿದ್ದೇವೆ. ತುಂಬು ಗರ್ಭಿಣಿಯನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯುವುದು, ಒಂದೆರಡು ಗಂಟೆ ಒಂದು ಆಸ್ಪತ್ರೆಯಲ್ಲಿ ಇರೋದು, ಅಲ್ಲಿ ಆಗೋದಿಲ್ಲ ಎಂದ ತಕ್ಷಣ ಮತ್ತೊಂದು ಆಸ್ಪತ್ರೆಗೆ ಎಂದು ಅಲೆದಾಡಿದ್ದೇವೆ. ಅದರ ಮೇಲೆ ನಮ್ಮ ಮೇಲೆ ಆಸ್ಪತ್ರೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಲಾಗಿದೆ. ನಾವು ಯಾವುದೇ ಹಾನಿ ಹಲ್ಲೆ ಮಾಡಿಲ್ಲ. ಎಲ್ಲಿಗೆ ಹೋದರೂ ಮೊದಲು ಆಸ್ಪತ್ರೆ ಬಿಲ್ ಕಟ್ಟಿ ಎನ್ನುವವರೇ ಹೊರತು ಚಿಕಿತ್ಸೆ ಮಾಡುತ್ತೇವೆ ಎನ್ನುವವರಿಲ್ಲ ಎಂದು ಹೇಳಿದರು.