ಬೆಳ್ತಂಗಡಿ: ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಎಂಬಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೋರ್ವರನ್ನು ಅವರ ಸಹೋದರಿಯ ಪುತ್ರ ಕತ್ತಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕರಿಮಣೇಲು ಗ್ರಾಮದ ಗಾಂಧಿನಗರ ನೂಯಿ ನಿವಾಸಿ ಸಂಜೀವ ಶೆಟ್ಟಿ(60) ಕೊಲೆಯಾದ ವ್ಯಕ್ತಿ. ಸಂಜೀವ ಶೆಟ್ಟಿ ಅವರ ಸಹೋದರಿಯ ಪುತ್ರ ಶ್ರೀಷಾ (36) ಎಂಬಾತನೇ ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾಗದ ಪಾಲು ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ತಾರಕಕ್ಕೇರಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಳೆದ ರಾತ್ರಿಯೇ ನಡೆದ ಘಟನೆ:
ಸಂಜೀವ ಶೆಟ್ಟಿಯವರು ನೂಯಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರಿಗೆ ಕುಡಿತದ ಅಭ್ಯಾಸವೂ ಇತ್ತು. ಪ್ರತಿದಿನ ಕೃಷಿ ಕೂಲಿ ಕೆಲಸ ಮಾಡಿಕೊಂಡು ಒಬ್ಬರೇ ನೆಲೆಸಿದ್ದರು. ಅವರ ಮನೆಯ ಪಕ್ಕದಲ್ಲೇ ನೆಲೆಸಿರುವ ಆರೋಪಿ ಶ್ರೀಷಾ ಅವರ ಮಧ್ಯೆ ಜಾಗದ ಪಾಲು ವಿಚಾರಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಅಂತೆಯೇ ಅಕ್ಟೋಬರ್ 7 ರಂದು ಸಂಜೆ 6 ಗಂಟೆಯ ಬಳಿಕ ರಾತ್ರಿ ಸಮಯದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಶ್ರೀಷಾ ತನ್ನ ಮಾವನಿಗೆ ಕತ್ತಿಯಿಂದ ಕಡಿದು ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸಂಜೀವ ಶೆಟ್ಟಿ ಅವರು ಪ್ರತಿದಿನ ಕೃಷಿ ಕೂಲಿಗಾಗಿ ತೆರಳುತ್ತಿದ್ದರು. ಶುಕ್ರವಾರ ತಡವಾದರೂ ಸಂಜೀವ ಶೆಟ್ಟಿ ಅವರ ಮನೆ ಬಾಗಿಲು ತೆರೆದುಕೊಳ್ಳದ್ದರಿಂದ ಅವರ ಜೊತೆ ಯಾವತ್ತೂ ಕೆಲಸಕ್ಕೆ ಹೋಗುತ್ತಿದ್ದ ಪಕ್ಕದ ಮನೆಯ ಮಹಿಳೆ ದೀಪಾ ಅವರು ಹುಡುಕಿಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಮತ್ತು ಮೃತ ಸಂಜೀವ ಶೆಟ್ಟಿ ಇಬ್ಬರೂ ಕುಡಿತದ ದಾಸರು. ಕಳೆದ ರಾತ್ರಿ ಶ್ರೀಷಾ ಕಂಠಪೂರ್ತಿ ಕುಡಿದಿದ್ದು, ಇದೇ ಅಮಲಿನಲ್ಲಿ ಮಾವನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಯ ಬಗ್ಗೆ ಸಂಜೀವ ಶೆಟ್ಟಿ ಅವರ ಪುತ್ರ ಪೊಲೀಸರಿಗೆ ದೂರು ನೀಡಿದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.
ಆರು ಕಡೆ ಗಂಭೀರವಾಗಿ ತಿವಿದ ಗಾಯ:
ಸಂಜೀವ ಶೆಟ್ಟಿ ಅವರ ಮರಣೋತ್ತರ ಪರೀಕ್ಷೆ ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿ ನಡೆದಿದ್ದು, ಈ ವೇಳೆ ಅವರ ದೇಹದಲ್ಲಿ ಒಟ್ಟು ಆರು ಕಡೆ ತಿವಿದ ಗಂಭೀರ ಗಾಯ ಪತ್ತೆಯಾಗಿದೆ. ಕುಡಿತದ ಅಮಲಿನಲ್ಲಿ ಶ್ರೀಷಾ ಸಿಕ್ಕ ಸಿಕ್ಕ ಕಡೆಗೆಲ್ಲಾ ಮಾವನನ್ನು ಕತ್ತಿಯಿಂದ ಕಡಿದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಸಹಿತ ವೇಣೂರು ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.