ಮಂಗಳೂರು: ಹಾವುಗಳೆಂದರೆ ಮಾರುದ್ದ ದೂರ ಓಡಿಹೋಗುವವರೇ ಹೆಚ್ಚು. ಕಚ್ಚುವ ಕಾರಣ ಅದನ್ನು ಕಂಡರೇನೆ ಭಯ ಬೀಳ್ತೀವಿ. ಆದರೆ, ಮಂಗಳೂರಿನಲ್ಲೊಬ್ಬ ಪದವಿ ವಿದ್ಯಾರ್ಥಿನಿ ಯಾವ ಭಯವೂ ಇಲ್ಲದೆ, ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಣೆ ಮಾಡುವಲ್ಲಿ ನಿಷ್ಣಾತಳಾಗಿದ್ದಾರೆ. ಇವರು ಈಗಾಗಲೇ 100ಕ್ಕೂ ಅಧಿಕ ಹಾವನ್ನು ಹಿಡಿದು ರಕ್ಷಿಸಿರುವುದು ವಿಶೇಷ..
ಹೌದು, ನಗರದ ಅಶೋಕನಗರ ನಿವಾಸಿ, ಸಂತ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಶರಣ್ಯಾ ಭಟ್ ಹಾವಿನ ರಕ್ಷಣೆ ಮಾಡುತ್ತಿರುವ ವಿದ್ಯಾರ್ಥಿನಿ. ಎಲ್ಲೇ ಹಾವುಗಳ ಕಂಡು ಬಂದರೂ ಶರಣ್ಯಾ ಭಟ್ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಈಕೆ ಅತೀ ವಿಷಕಾರಿಯಾದ ಕನ್ನಡಿ ಹಾವು, ಕಟ್ಟ ಹಾವು, ನಾಗರಹಾವು, ಹೆಬ್ಬಾವು, ಕೇರೆ ಹಾವು, ನೀರು ಹಾವು ಸೇರಿದಂತೆ ಹಲವಾರು ವಿಷಕಾರಿ ಸರಿಸೃಪಗಳನ್ನು ಹಿಡಿದು ರಕ್ಷಿಸಿದ್ದಾರೆ. ಕಳೆದ 2 ವರ್ಷಗಳಿಂದ ಶರಣ್ಯಾ ಹಾವು ಹಿಡಿದು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಾವು ಮನೆಯೊಳಗೆ ಬಂದು, ಅದರಿಂದ ತೊಂದರೆ ಇದೆ ಎಂದಾದರೆ ಮಾತ್ರ ಅಂತಹ ಸ್ಥಳಕ್ಕೆ ಹೋಗಿ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರಂತೆ. ಒಂದು ವೇಳೆ ಅದು ಮನೆಯ ಪಕ್ಕ, ಬಿಲ, ತೋಡುಗಳಲ್ಲಿ ಕಂಡುಬಂದರೆ ಅದನ್ನು ಹಿಡಿಯುವುದಿಲ್ಲ ಎಂಬುದು ಶರಣ್ಯಾರ ಸ್ಪಷ್ಟೋಕ್ತಿ.
ಕಪ್ಪೆಗಳ ಬಗ್ಗೆ ಅಧ್ಯಯನ..
ಕಪ್ಪೆಗಳ ಬಗ್ಗೆಯೂ ಅಧ್ಯಯನ ಮಾಡುತ್ತಿರುವ ಶರಣ್ಯಾ ಭಟ್, ತನಗೆ ಹಾವು ಇನ್ನಿತರ ಜೀವಿಗಳ ಬಗ್ಗೆ ಆಸಕ್ತಿ ತಳೆಯಲು ಅಜ್ಜ ಪ್ರಕಾಶ ಬಾಳ್ತಿಲ್ಲಾಯರೇ ಪ್ರೇರಣೆ. ಕೊಕ್ಕಡದಲ್ಲಿರುವ ಅವರ ಮನೆಗೆ ಹೋದಾಗ ಅಲ್ಲಿನ ಗುಡ್ಡ, ಕಾಡು, ಗದ್ದೆ, ಬಯಲು ಸುತ್ತಾಡಿಸಿ ಪರಿಸರ ಜೀವಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಾರೆ. ಇದರಿಂದಲೇ ಈ ಬೆಳವಣಿಗೆ ಸಾಧ್ಯವಾಯಿತು ಎನ್ನುತ್ತಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವಿಷಪೂರಿತ ಹಾವು ಹಿಡಿಯಲು ಉಜಿರೆಯ ಸ್ನೇಕ್ ಜಾಯ್ ತರಬೇತಿ ನೀಡಿದರೆ, ಅಶೋಕನಗರದ ಉರಗ ತಜ್ಞ ಅತುಲ್ ಪೈ ನನ್ನ ಆಸಕ್ತಿಗೆ ಸಾಥ್ ನೀಡಿದರು. ಹಾವುಗಳ ಬಗ್ಗೆ ಡಾ.ವರದಗಿರಿ ಮುಂಬೈ ಮಾರ್ಗದರ್ಶನ ನೀಡಿದ್ದರು. ಕಪ್ಪೆಗಳ ಪ್ರಬೇಧಗಳ ಬಗ್ಗೆ ಡಾ.ವಿನೀತ್ ಕುಮಾರ್ರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಎಂಎಸ್ಸಿ ಮಾಡಿ, ಅರಣ್ಯ ಇಲಾಖೆಗೆ ಸೇರ್ಪಡೆಯಾಗಬೇಕು ಎಂಬುದು ಶರಣ್ಯಾರ ಗುರಿಯಾಗಿದೆ.
ಇದರೊಂದಿಗೆ ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿರುವ ಶರಣ್ಯಾ ಭಟ್ ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪೂರ್ವ ಹಂತ ಹಾಗೂ ಭರತನಾಟ್ಯದಲ್ಲಿ ವಿದ್ವತ್ ಪದವಿ ಅಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಭದ್ರತೆ ನೀಡಿದ್ದ 42 ಕೆಎಸ್ಆರ್ಪಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್